ಕಲಬುರಗಿ: ಬೆಂಬಲ ಬೆಲೆ ಯೋಕನೆಯಡಿಯಲ್ಲಿ ಹೆಸರುಕಾಳು ಹಾಗೂ ಉದ್ದು ಕಾಳು ಖರೀದಿಗೆ ಸರಕಾರ ನಿರ್ಧರಿಸಿ ಖರೀದಿ ಕೇಂದ್ರ ಸ್ಥಾಪನೆಗೆ ಆದೇಶಿಸಿದೆ. ಆದರೆ ಸರಕಾರದ ಈ ಕ್ರಮ ತುಂಬಾ ವಿಳಂಬವಾಗಿದ್ದು ಕೇವಲ ಕಾಟಾಚಾರದಿಂದ ಕೂಡಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಆಧರಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಹೆಸರು ಕಾಳು ಹಾಗೂ ಉದ್ದು ರಾಶಿ ಮಾಡಿದ ಬಹುತೇಕ ರೈತರು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಈ ಹಿಂದೆ ಒಂದುವರೆ ತಿಂಗಳಲ್ಲಿ ಮೂರು ಬಾರಿ
ಪತ್ರ ಬರೆದು ಸರಕಾರಕ್ಕೆ ಮನವಿ ಮಾಡಿ ತುರ್ತಾಗಿ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಗೆ ನೆರವಾಗುವಂತೆ ಕೇಳಿಕೊಂಡಿದ್ದರೂ ತನ್ನ ದಿವ್ಯ ನಿರ್ಲಕ್ಷ್ಯ ಮುಂದುವರೆಸಿ ಈಗ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿ ಖರೀದಿ ಕೇಂದ್ರ ಸ್ಥಾಪಿಸಲು ಆದೇಶ ಹೊರಡಿಸಿದ್ದು ನೋಡಿದರೆ ಇದೊಂದು ಕಾಟಾಚಾರದ ನಿರ್ಧಾರ ಎಂದು ತೋರುತ್ತದೆ ಎಂದು ಟೀಕಿಸಿದ್ದಾರೆ.
ಸರಕಾರದ ನಿರ್ಧಾರದ ಪ್ರಕಾರ ಜಿಲ್ಲೆಯಲ್ಲಿ 64 ಖರೀದಿ ಕೇಂದ್ರ ಸ್ಥಾಪಿಸಿ ಹೆಸರು ಕಾಳನ್ನು ಪ್ರತಿಕ್ವಿಂಟಾಲ್ ಗೆ 7196 ರೂ ಹಾಗೂ ಉದ್ದು 6000 ರೂ ನಿಗದಿ ಮಾಡಲಾಗಿದೆ. ಪ್ರತಿಯೊಬ್ಬ ರೈತರು 4 ಕ್ವಿಂಟಾಲ್ ಹಾಗೂ ಪ್ರತಿ ಎಕರೆಗೆ 4 ಕ್ವಿಂಟಾಲ್ ಹೆಸರು ಕಾಳು ನಿಗದಿಪಡಿಸಿದ್ದರೆ, ಪ್ರತಿಯೊಬ್ಬ ರೈತರಿಂದ 6 ಕ್ವಿಂಟಾಲ್ ಹಾಗೂ ಪ್ರತಿ ಎಕರೆಗೆ 3 ಕ್ವಿಂಟಾಲ್ ನಂತೆ ಉದ್ದು ನಿಗದಿಪಡಿಸಲಾಗಿದೆ. ರೈತರು ತಮ್ಮ ಹೆಸರು ನೋಂದಾಯಿಸಲು 15-10-2020 ಕೊನೆಯದಿನ ಹಾಗೂ ಧಾನ್ಯಗಳನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು 15-11-2020 ಕೊನೆಯದಿನವಾಗಿದೆ.
ಸರಕಾರದ ಈ ಕ್ರಮವನ್ನೂ ಟೀಕಿಸಿರುವ ಪ್ರಿಯಾಂಕ್ ಖರ್ಗೆ ಅವರು ಈ ರೀತಿ ನಿಗದಿಪಡಿಸಿ ಅಪಾರ ಪ್ರಮಾಣದಲ್ಲಿ ಧಾನ್ಯಗಳನ್ನು ಬೆಳೆದ ರೈತರು ಉಳಿದ ಧಾನ್ಯವನ್ನು ಹೊರಗಡೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡುವಂತ ಅನಿವಾರ್ಯ ಸ್ಥಿತಿಯನ್ನು ಸರಕಾರವೇ ನಿರ್ಮಿಸಿದಂತಾಗಿದೆ.
ವಾಸ್ತವದ ಸ್ಥಿತಿ ಎಂದರೆ ಬಹುತೇಕ ರೈತರು ಹಿಂಗಾರು ಬೆಳೆಯ ಬಿತ್ತನೆಗೆ ಭೂಮಿ ಹದ ಮಾಡುವುದು ಸೇರಿದಂತೆ ಬಿತ್ತನೆ ಬೀಜಗೊಬ್ಬರ ಖರೀದಿಗೆ ಹಣದ ಕೊರತೆ ನೀಗಿಸಲು ಕಡಿಮೆ ಬೆಲೆಯಲ್ಲಿ ಹೆಸರು ಮಾರಾಟ ಮಾಡಿದ್ದಾರೆ. ಈಗ ಖರೀದಿ ಕೇಂದ್ರದಲ್ಲಿ ರೈತರು ತಮ್ಮ ಹೆಸರು ನೋಂದಣಿ ಮಾಡಲು ಅಕ್ಟೋಬರ್ 15 ರಂದು ಕೊನೆ ದಿನ ನಿಗದಿಪಡಿಸಲಾಗಿದೆ. ಆದರೆ, ಖರೀದಿ ಕೇಂದ್ರ ಸ್ಥಾಪನೆಗೆ ಕನಿಷ್ಠ ಎರಡು ವಾರ ಬೇಕಾಗಬಹುದು. ಖರೀದಿ ಕೇಂದ್ರಗಳಲ್ಲಿ ಧಾನ್ಯ ಮಾರಾಟ ಮಾಡಲು ನವೆಂಬರ್15 ನೇ ತಾರೀಖು ನಿಗದಿ ಮಾಡಲಾಗಿದೆ. ಹಾಗಾದರೆ ಸರಕಾರದ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ರೈತರಿಗೆ ಹಣ ಕೈ ಸೇರಲು ಸಾಕಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಹಾಗಾಗಿ ಸರಕಾದ ನಿರ್ಧಾರವ ಕೇವಲ ರೈತರ ಕಣ್ಣೊರೆಸುವ ತಂತ್ರದಂತೆ ಕಂಡುಬರುತ್ತಿದೆ ಎಂದು ಶಾಸಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ಅಪಾರ ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿದ್ದು ರೈತರು ಸರಿಯಾದ ಸಮಯದಲ್ಲಿ ಧಾನ್ಯಗಳನ್ನು ಖರೀದಿ ಕೇಂದ್ರಗಳಿಗೆ ಸಾಗಿಸಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರ ಪರ ಕೇವಲ ಕಾಟಾಚಾರದ ಕಾಳಜಿ ತೋರಿಸುತ್ತಿದ್ದು ರೈತರ ವಿರೋಧಿ ಬಿಲ್ ಪಾಸ್ ಮಾಡುವ ಉದ್ದೇಶ ಹೊಂದಿವೆ ಎಂದು ಅವರು ದೂರಿದ್ದಾರೆ.
ಹಾಗಾಗಿ ಸರಕಾರ ಈ ಕೂಡಲೇ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ನಿಗದಿಪಡಿಸಿದಕ್ಕಿಂತ ಹೆಚ್ಚು ಧಾನ್ಯಗಳನ್ನು ಖರೀದಿಸಲು ಮುಂದಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.