ಶಹಾಬಾದ:ಬೆಣ್ಣೆತೊರಾ ಜಲಾಶಯದಿಂದ ಶನಿವಾರ ಸಾಯಂಕಾಲ ಹರಿಬಿಟ್ಟ ಅಪಾರ ಪ್ರಮಾಣದ ನೀರು ಕಾಗಿಣಾ ನದಿಯಲ್ಲಿ ಪ್ರವಾಹ ಉಂಟಾಗಿ ಮುತ್ತಗಾ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಅಕ್ಷರಶಃ ಮುತ್ತಗಾ ಗ್ರಾಮ ನಡುಗಡ್ಡೆಯಾದಂತಾಗಿದೆ.
ಶನಿವಾರ ರಾತ್ರಿ ಸುಮಾರು 11 ಗಂಟೆಗೆ ನೀರಿನ ಮಟ್ಟ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹಳೆ ಮುತ್ತಗಾ ಗ್ರಾಮ ಬಿಟ್ಟು ಎತ್ತರ ಪ್ರದೇಶ ಹೊಸ ಮುತ್ತಗಾ ಗ್ರಾಮದ ಬಂಧು ಬಳಗದವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ದವಸ ಧಾನ್ಯಗಳು ಹಾಳಾಗಿವೆ.ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಮನೆಯಿಂದ ಹೊರಬಂದು ಸರಕಾರಿ ಶಾಲೆಯಲ್ಲಿ ತಂಗಿದ್ದಾರೆ.
ಅಲ್ಲದೇ ಭಂಕೂರ ಗ್ರಾಮದಿಂದ ಮುತ್ತಗಾ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿರುವ ಸೇತುವೆ ಹಾಗೂ ಮುತ್ತಗಾ ಗ್ರಾಮದಿಂದ-ಕದ್ದರಗಿ ಗ್ರಾಮಕ್ಕೆ ಹೋಗುವ ಮಧ್ಯದ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ತುಂಬಿ ಗ್ರಾಮವನ್ನು ಸುತ್ತುವರೆದಿದೆ. ಎರಡು ದಿನಗಳಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿದೆ.
ಮನೆಗೆ ರಾತ್ರಿ ನುಗ್ಗಿದ ಪರಿಣಾಮ ರಾತ್ರಿ ನಿದ್ದೆಯಿಲ್ಲದೇ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ. ಹಳ್ಳಿಯ ಬಹುತೇಕ ಮನೆಗಳು ನೀರಿನಿಂದ ಆವೃತವಾಗಿದೆ. ಒಂದು ವೇಳೆ ಮಳೆ ಮತ್ತೆ ಪ್ರಾರಂಭವಾದರೆ ಗ್ರಾಮಸ್ಥರ ಪಾಡೇನು. ಜಿಲ್ಲಾಡಳಿದವರು ಇಲ್ಲಿನ ಜನರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಬಸವರಾಜ ಕೋರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಗ್ರಾಮಕ್ಕೆ ರಾತ್ರಿ 11 ಗಂಟೆಗೆ ಪೇಠಸಿರೂ ಕಾಟಮ್ಮದೇವರಹಳ್ಳಿ ಮಾರ್ಗವಾಗಿ ಕಂದಾಯ ಅಧಿಕಾರಿ ವೀರಭದ್ರಪ್ಪ ಹಾಗೂ ಗ್ರಾಮ ಲೆಕ್ಕಿಗ ರೇವಣಸಿದ್ದ ಪಾಟೀಲ ಹಾಗೂ ಪೊಲೀಸರು ಬಂದು ಸುರಕ್ಷತೆ ಸ್ಥಳಕ್ಕೆ ತೆರಳುವಂತೆ ತಿಳಿಸಿದರಲ್ಲದೇ, ಸರಕಾರಿ ಶಾಲೆಯಲ್ಲಿ ತಂಗಲು ಅವಕಾಶ ಮಾಡಿಕೊಟ್ಟರು. ಅಲ್ಲದೇ ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದರು.
.
ಮುತ್ತಗಾ ಗ್ರಾಮ ಸಂಪೂರ್ಣ ನೀರಿನಿಂದ ಸುತ್ತವರೆದಿದೆ. ಗ್ರಾಮಕ್ಕೆ ಹೋಗಿ ಬರಲು ದೂರದ ಪೇಠಸಿರೂರ ಮಾರ್ಗ ಬಿಟ್ಟರೇ ಯಾವುದೇ ಸಂಚಾರ ವ್ಯವಸ್ಥೆಯಿಲ್ಲ.ಆದ ಕಾರಣ ಸರಕಾರಿ ಶಾಲೆಯಲ್ಲಿಯೇ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಚಂದ್ರಪಳ್ಳಿ ಮತ್ತು ಬೆಣ್ಣೆತೊರಾ ಜಲಾಶಯದಿಂದ ನೀರು ಬಿಡುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದು. ಒಂದು ವೇಳೆ ನೀರು ಹರಿಬಿಟ್ಟರೇ ಅಥವಾ ಮತ್ತೆ ಮಳೆ ಬಂದು ನೀರಿನ ಮಟ್ಟ ಹೆಚ್ಚಾದರೆ ಜಿಲ್ಲಾಡಳಿತ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕೆಂದು ಮನವಿ –ಬಸವರಾಜ ಕೋರಿ ರೈತ ಹೋರಾಟಗಾರ.