ಸುರಪುರ: ವ್ಯಕ್ತಿಯನ್ನು ವಿವಿಧ ರೀತಿಯಲ್ಲಿ ಯಾಮಾರಿಸಿ ಬಳಿಯಲ್ಲಿದ್ದ ಹಣ,ಬ್ಯಾಗ್,ಮೊಬೈಲ್ ಮತ್ತಿತರೆ ಬೆಲೆ ಬಾಳುವ ವಸ್ತುಗಳ ಕಳ್ಳತನ ಮಾಡುತ್ತಾರೆ ಹುಷಾರಾಗಿರುವಂತೆ ಪೊಲೀಸ್ ಇಲಾಖೆ ನಿರಂತರ ಜಾಗೃತಿ ಮೂಡಿಸುತ್ತಿದ್ದರು ನಿರ್ಲಕ್ಷ್ಯ ವಹಿಸುವ ಜನರು ಯಾಮಾರಿ ಹಣ ಕಳೆದುಕೊಳ್ಳುವ ಘಟನೆಗಳು ಜರಗುತ್ತಲೆ ಇವೆ.
ಇದಕ್ಕೆ ಉದಾಹರಣೆ ಎಂಬಂತೆ ನಗರದ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತದ ಬಳಿಯಲ್ಲಿ ವ್ಯಕ್ತಿಯೋರ್ವ ಹಾಡು ಹಗಲೆ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿ ಕಳೆದುಕೊಂಡು ಪರಿತಪಿಸಿದ ಘಟನೆ ನಡೆದಿದೆ.
ತಾಲ್ಲೂಕುನ ಕಿರದಹಳ್ಳಿ ಗ್ರಾಮದ ಆದಪ್ಪಗೌಡ ಎಂಬ ವ್ಯಕ್ತಿ ಕರ್ನಾಟಕ ಬ್ಯಾಂಕಿನಲ್ಲಿ ಎರಡು ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡಿದ್ದಾರೆ.ಅದರಲ್ಲಿ ಎರಡು ನೂರು ಮುಖ ಬೆಲೆಯ ಇಪ್ಪತ್ತು ಸಾವರ ಹಾಗು ಐದು ನೂರು ಮುಖ ಬೆಲೆಯ ಐವತ್ತು ಸಾವಿರ ಒಟ್ಟು ಎಪ್ಪತ್ತು ಸಾವಿರ ರೂಪಾಯಿ ಅಂಗಿಯ ಜೇಬಲ್ಲಿಟ್ಟುಕೊಂಡು,ಐವತ್ತು ರೂಪಾಯಿ ಮುಖ ಬೆಲೆಯ ಒಂದು ಲಕ್ಷ ಎಪ್ಪತ್ತು ಸಾವಿರ ರೂಪಾಯಿ ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಬಂದಿದ್ದಾರೆ.ಹಣ ತರುವುದನ್ನು ನೋಡಿದ ಕಳ್ಳರು ವ್ಯಕ್ತಿಯ ಬೆನ್ನಿಗೆ ರಾಡಿ ಸಿಡಿಸಿ ತಾವೆ ವ್ಯಕ್ತಿಗೆ ನಿಮ್ಮ ಬೆನ್ನಿಗೆ ರಾಡಿ ಸಿಡಿದಿದೆ ಎಂದು ಹೇಳಿದ್ದಾರೆ.ಇದನ್ನು ನೋಡಿಕೊಂಡ ವ್ಯಕ್ತಿಯು ಮಹಾತ್ಮ ಗಾಂಧಿ ವೃತ್ತದ ಎದುಗಡೆಯಿರುವ ಬೇಕರಿಯಲ್ಲಿ ನೀರಿನ ಬಾಟಲನ್ನು ಪಡೆದು ಹಣದ ಬ್ಯಾಗನ್ನು ಬೇಕರಿಯ ಟೇಬಲ್ ಮೇಲಿಟ್ಟು ಅಂಗಿ ತೆಗೆಯುವಾಗ ಕಳ್ಳರು ಹಣ ಎಗರಿಸಿ ಪರಾರಿಯಾಗಿದ್ದಾರೆ.ಅಂಗಿ ತೊಳೆದುಕೊಂಡು ಹಣ ನೋಡಿದ ವ್ಯಕ್ತಿಯು ಕಳ್ಳತನವಾಗಿದ್ದು ಕಂಡು ಹೌಹಾರಿದ್ದಾನೆ.
ನಗರ ಪೊಲೀಸರಿಗೆ ವಿಷಯ ತಿಳಿಸಿದ್ದು ದೂರು ದಾಖಲಿಸಿಕೊಂಡು ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ಕಳ್ಳತನ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಆದಷ್ಟು ಬೇಗನೆ ಕಳ್ಳರನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಮನೋಹರ ರಾಠೋಡ,ಬಸವರಾಜ ಮುದ್ಗಲ್ ಹಾಗು ಆದಪ್ಪಗೌಡ ಮತ್ತವರ ಜೊತೆಯವರಾದ ಮಾಳಪ್ಪ ಕಿರದಹಳ್ಳಿ,ಮಲ್ಲಿಕಾರ್ಜುನ ಇತರರಿದ್ದರು.