ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಹೈನುಗಾರಿಕೆ ತಾಣಗಳು(ಡೈರಿ ಫಾಮ್ರ್ಸ್) ಹಾಗೂ ಗೋಶಾಲೆಗಳನ್ನು ಸೃಷ್ಟಿಲು ಹಾಗೂ ಕಾರ್ಯನಿರ್ವಹಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಷ್ಟ್ರೀಯ ಹಸಿರು ನಾಯಾಧೀಕರಣವು ನೀಡಿದ ಆದೇಶಗಳಿಗೆ ಅನುಸಾರವಾಗಿ 10ಕ್ಕಿಂತ ಹೆಚ್ಚು ಪ್ರಾಣಿಗಳನ್ನು ಹೊಂದಿರುವ ಎಲ್ಲಾ ಡೈರಿ ಫಾರಂಗಳು ಮತ್ತು ಗೋಶಾಲೆಗಳು ಸ್ಥಾಪನೆಗೆ ಸಮ್ಮತಿ ಪತ್ರ (ಸಿಎಫ್‍ಇ) ಮತ್ತು ಕಾರ್ಯಾಚರಣೆಗೆ ಸಮ್ಮತಿ ಪತ್ರ (ಸಿಎಫ್‍ಒ)ವನ್ನು ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ಮತ್ತು ವಾಯು ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1981ರ ಅಡಿಯಲ್ಲಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಕೈಗಾರಿಕೆಗಳ ವರ್ಗೀಕರಣದ ಪ್ರಕಾರ ಡೈರಿ ಫಾರಂಗಳನ್ನು ಕಿತ್ತಳೆ(ಆರೆಂಜ್) ವರ್ಗಕ್ಕೆ ಮತ್ತು ಗೋಶಾಲೆಗಳನ್ನು ಹಸಿರು(ಗ್ರೀನ್) ವರ್ಗಕ್ಕೆ ವರ್ಗೀಕರಿಸಲಾಗಿದೆ. 10ಕ್ಕಿಂತ ಹೆಚ್ಚು ಪ್ರಾಣಿಗಳನ್ನು ಹೊಂದಿರುವ ಎಲ್ಲಾ ಡೈರಿ ಫಾರಂಗಳು ಮತ್ತು ಗೋಶಾಲೆಗಳು 15 ದಿನಗಳಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಪ್ಪಿಗೆ ಪಡೆಯಲು ನಿರ್ದೇಶಿಸಲಾಗಿದೆ. ಡೈರಿ ಫಾರಂಗಳು ಮತ್ತು ಗೋಶಾಲೆಗಳ ಪರಿಸರ ನಿರ್ವಹಣೆಗಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿಸಿದ ಮಾರ್ಗಸೂಚಿಗಳು ಕೆಎಸ್‍ಪಿಸಿಬಿ ವೆಬ್‍ಸೈಟ್ ನಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.