ಶಹಾಬಾದ:ಧಾರಾಕಾರವಾಗಿ ಸುರಿದ ಮಳೆ, ಬೆಣ್ಣೆತೊರಾ ಹಾಗೂ ಚಂದ್ರಂಪಳ್ಳಿ ಜಲಾಶಯದಿಂದ ಹರಿಬಿಟ್ಟ ಅಪಾರ ಪ್ರಮಾಣದ ನೀರು ಮುತ್ತಗಾ ಗ್ರಾಮಕ್ಕೆ ನುಗ್ಗಿದ್ದರಿಂದ ಮುತ್ತಗಾ ಗ್ರಾಮ ಮತ್ತು ಹೊನಗುಂಟಾ ಗ್ರಾಮದ ಭೀಮ ನಗರ ಹಾಗೂ ಶಿಬಿರಕಟ್ಟಾ ಪ್ರದೇಶ ಬುಧವಾರ ಅಕ್ಷರಶಃ ನಡುಗಡ್ಡೆಯಾದಂತಾಗಿದೆ.
ರಾತ್ರಿಯೆಲ್ಲಾ ಮಳೆಯಾಗಿ ಬೆಳಿಗ್ಗೆ ನೀರಿನ ಮಟ್ಟ ಹೆಚ್ಚಾಗುತ್ತಿರುವುದನ್ನು ಗಮನಿಸಿದ ಮುತ್ತಗಾ ಗ್ರಾಮಸ್ಥರು ಹೊಸ ಗ್ರಾಮ ಬಿಟ್ಟು ಎತ್ತರ ಪ್ರದೇಶ ಹಳೆ ಮುತ್ತಗಾ ಗ್ರಾಮದ ಬಂಧು ಬಳಗದವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.ಮನೆಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ದವಸ ಧಾನ್ಯಗಳು ಹಾಳಾಗಿವೆ.ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಮನೆಯಿಂದ ಹೊರಬಂದು ಸರಕಾರಿ ಶಾಲೆಯಲ್ಲಿ ತಂಗಿದ್ದಾರೆ.
ಅಲ್ಲದೇ ಭಂಕೂರ ಗ್ರಾಮದಿಂದ ಮುತ್ತಗಾ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿರುವ ಸೇತುವೆ ಹಾಗೂ ಮುತ್ತಗಾ ಗ್ರಾಮದಿಂದ-ಕದ್ದರಗಿ ಗ್ರಾಮಕ್ಕೆ ಹೋಗುವ ಮಧ್ಯದ ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ತುಂಬಿ ಗ್ರಾಮವನ್ನು ಸುತ್ತುವರೆದಿದೆ. ಸಂಚಾರ ವ್ಯವಸ್ಥೆ ಸಂಪೂರ್ಣ ಕಡಿತಗೊಂಡಿದೆ. ವಿದ್ಯುತ್ ಕಡಿತವಾಗಿದ್ದರಿಂದ ಇಲ್ಲಿನ ಜನರು ಕತ್ತಲೆಯಲ್ಲಿ ಜೀವನ ಸಾಗಿಸಬೇಕಿದೆ. ತಿನ್ನಲು ಆಹಾರವಿಲ್ಲ, ಕುಡಿಯಲು ಶುದ್ಧವಾದ ನೀರಿಲ್ಲದೇ ಸಂಕಷ್ಟ ಪಡುತ್ತಿದ್ದಾರೆ. ರಾತ್ರಿ ನಿದ್ದೆಯಿಲ್ಲದೇ ಆತಂಕದಲ್ಲಿಯೇ ಕಾಲ ಕಳೆದಿದ್ದಾರೆ. ಹಳ್ಳಿಯ ಬಹುತೇಕ ಮನೆಗಳು ನೀರಿನಿಂದ ಆವೃತವಾಗಿದೆ. ಬೆಳಿಗ್ಗೆಯಿಂದ – ರಾತ್ರಿಯಾದರೂ ನೀರಿನ ಮಟ್ಟ ಹೆಚ್ಚಾಗುತ್ತಲೇ ಇದೆ. ಒಂದು ವೇಳೆ ರಾತ್ರಿ ಮಳೆ ಮತ್ತೆ ಪ್ರಾರಂಭವಾದರೆ ಗ್ರಾಮಸ್ಥರ ಪಾಡೇನು ಎಂದು ಬಿಜೆಪಿ ಮುಖಂಡ ಮಹೇಂದ್ರ ಕೋರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಹೊನಗುಂಟಾ ಗ್ರಾಮದ ಭೀಮ ನಗರ ಹಾಗೂ ಶಿಬಿರಕಟ್ಟಾ ಪ್ರದೇಶಕ್ಕೆ ನೀರು ಆವರಿಸಿರುವುದರಿಂದ ಅಂಗನವಾಡಿ ಕೇಂದ್ರಗಳು ಮುಳುಗಡೆಯಾಗಿವೆ.ಅಲ್ಲದೇ ಸಂಪರ್ಕ ರಸ್ತೆ ಕಡಿತಗೊಂಡು ಜನರು ಆತಂಕದ ಸ್ಥಿತಿಯಲ್ಲಿದ್ದಾರೆ.
ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸೂಚನೆ
ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಗ್ರಾಮಸ್ಥರ ಸಮಸ್ಯೆಯ ಬಗ್ಗೆ ಹಾಗೂ ಗ್ರಾಮದಲ್ಲಿ ನುಗ್ಗಿದ ಪ್ರವಾಹದ ಭಾವಚಿತ್ರವನ್ನು ಪಡೆದು ವಾಟ್ಸ ಆಪ್ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ರವಾನಿಸಿದ್ದಾರೆ.ಅದಕ್ಕೆ ಪ್ರಿಯಾಂಕಾ ಖರ್ಗೆ ಮುತ್ತಗಾ ಹಾಗೂ ತಾಲೂಕಿನಲ್ಲಿ ಯಾರಿಗೂ ಯಾವುದೇ ರೀತಿ ಅಪಾಯವಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಉದಯವಾಣಿಗೆ ಶೀವಾನಂದ ಪಾಟೀಲ ಮರತೂರ ತಿಳಿಸಿದ್ದಾರೆ.
ಯಾರು ನದಿ ಮತ್ತು ಹಳ್ಳದ ಹತ್ತಿರ ಸುಳಿಯದಿರಿ ಮುತ್ತಗಾ ಗ್ರಾಮ ಸಂಪೂರ್ಣ ನೀರಿನಿಂದ ಸುತ್ತವರೆದಿದೆ. ಗ್ರಾಮಕ್ಕೆ ಹೋಗಿ ಬರಲು ಮಾರ್ಗಗಳು ನೀರಿನಿಂದ ಜಲಾವೃತಗೊಂಡಿವೆ. ಇದರಿಂದ ಈ ಗ್ರಾಮಕ್ಕೆ ಹೋಗಲು ಮತ್ತು ಬರಲು ಯಾವುದೇ ಸಂಚಾರ ವ್ಯವಸ್ಥೆಯಿಲ್ಲ.ಆದ ಕಾರಣ ಸರಕಾರಿ ಶಾಲೆಯಲ್ಲಿಯೇ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ತಾಲೂಕಿನಲ್ಲಿ ಇನ್ನೂ ಮಳೆಯಾಗುವ ಸಾಧ್ಯತೆಯಿದೆ.ಅಲ್ಲದೇ ಜಲಾಶಯಗಳಿಂದ ನೀರು ಹರಿದು ಬರುತ್ತಿದ್ದು, ಯಾರು ಹಳ್ಳ ಹಾಗೂ ನದಿಯ ಹತ್ತಿರ ಹೋಗಕೂಡದು. ಮನೆಯಲ್ಲಿ ನೀರು ನುಗ್ಗಿ ಏನಾದರೂ ತೊಂದರೆಯಾದರೇ, ಆಹಾರದ ಸಮಸ್ಯೆಯಿದ್ದರೇ ನನಗೆ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ- ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.