ಕಲಬುರಗಿ: ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಸೋಮವಾರ ಅಫಜಲಪೂರ ತಾಲೂಕಿನ ಬಂದರವಾಡ, ಗಾಣಗಾಪೂರ, ಕರಜಗಿ ಗ್ರಾಮಗಳಲ್ಲಿ ಭೀಮಾ ಪ್ರವಾಹದಿಂದ ತತ್ತರಿಸಿರುವ ಜನರು ಆಶ್ರಯ ಪಡೆದಿರುವ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಬಂದರವಾಡ ಗ್ರಾಮಕ್ಕೆ ನೀರು ನುಗ್ಗಿದನ್ನು ವೀಕ್ಷಿಸಿದ ನಂತರ ಗ್ರಾಮದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಊಟೋಪಚಾರ ಮತು ಮೂಲಭೂತ ಸೌಕರ್ಯ ಕಲ್ಪಿಸಿರುವ ಬಗ್ಗೆ ಸ್ವತ ಸಂತ್ರಸ್ತರಿಂದಲೆ ಮಾಹಿತಿ ಪಡೆದಿದಲ್ಲದೆ ಅವರ ಅಹವಾಲನ್ನು ಆಲಿಸಿದರು. ಸಂತ್ರಸ್ತರಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆ ಹಾಲು, ಮಕ್ಕಳಿಗೆ ಬಿಸ್ಕತ್ ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ನೀರು ಇಳಿಮುಖವಾಗುವವರೆಗೂ ನಿರಾಶ್ರಿತರು ಇಲ್ಲಿಯೆ ಇರಬೇಕು. ನಿಮ್ಮ ಆರೋಗ್ಯದ ಬಗ್ಗೆ ಕಾಲಜಿ ವಹಿಸಬೇಕು ಎಂದು ಸಂತ್ರಸ್ತರಿಗೆ ಡಿ.ಸಿ. ವಿ.ವಿ.ಜ್ಯೋತ್ಸ್ನಾ ತಿಳಿಸಿದಲ್ಲದೆ ಯಾರು ಆತಂಕಕ್ಕೊಳಗಾಗಬಾರದು ಎಂದು ಅವರಲ್ಲಿ ಧೈರ್ಯ ತುಂಬಿದರು. ಬಹಳಷ್ಟು ಸಂತ್ರಸ್ತರು ಮನೆ-ಮಠ ಕಳೆದುಕೊಂಡ ಬಗ್ಗೆ ಡಿ.ಸಿ. ಅವರ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಡಿ.ಸಿ. ಅವರು ಸ್ಥಳೀಯ ಸಾಸಕರು ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ. ಅವರೊಂದಿಗೆ ಚರ್ಚಿಸಿ ನಿಮಗೆ ಶಾಸ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನಂತರ ಸುಕ್ಷೇತ್ರ ಗಾನಗಾಪೂರಕ್ಕೆ ಭೇಟಿ ನೀಡಿ ಮುಳುಗಡೆಯಾಗಿರುವ ಸಂಗಮ ಕ್ಷೇತ್ರವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಗ್ರಾಮದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಧ್ಯಾಹ್ನದ ಊಟ ಸೇವಿಸಿ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ನೀಡಲಾಗುತ್ತಿರುವ ಊಟದ ಗುಣಮಟ್ಟ ಪರಿಶೀಲಿಸಿದರು. ತದನಂತರ ಕರಜಗಿ ಗ್ರಾಮದ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದರು.
ಸೊನ್ನ ಬ್ಯಾರೇಜಿಗೆ ಭೇಟಿ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಸೊನ್ನ ಬ್ಯಾರೇಜಿಗೆ ಭೇಟಿ ನೀಡಿ ಕಾರ್ಯನಿರ್ವಾಹಕ ಅಭಿಯಂತ ಅಶೋಕ ಕಲಾಲ್ ಅವರಿಂದ ಬ್ಯಾರೇಜಿಗೆ ಬರುತ್ತಿರುವ ನೀರಿನ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಐ.ಎ.ಎಸ್. ಪ್ರೊಬೇಷನರ್ ಆಕಾಶ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.