ಕಲಬುರಗಿ: ಭೀಮಾ ನದಿಯ ಪ್ರವಾಹದಿಂದ ತತ್ತರಿಸಿ ಹೋಗಿರುವ ಜಿಲ್ಲೆಯಲ್ಲಿ ಶುಕ್ರವಾರ ಸಾಯಂಕಾಲದ ವರೆಗೆ 92 ಗ್ರಾಮಗಳ 27809 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅಕ್ಟೋಬರ್ 22ರ ವರೆಗೆ 160 ಕಾಳಜಿ ಕೇಂದ್ರಗಳನ್ನು ತೆರೆದು ನಿರಾಶ್ರಿತರಿಗೆ ಆಶ್ರಯ ನೀಡಲಾಗಿತ್ತು. ಪ್ರಸ್ತುತ ಭೀಮಾ ನದಿಯಲ್ಲಿನ ಪ್ರವಾಹ ತಗ್ಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲೆಯಾದ್ಯಂತ 19 ಕಾಳಜಿ ಕೇಂದ್ರಗಳು ಚಾಲ್ತಿಯಲ್ಲಿದ್ದು, ಇಲ್ಲಿ 2357 ಜನರಿಗೆ ಆಶ್ರಯ ಕಲ್ಪಿಸಿ ಅವರಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ. ಉಳಿದಂತೆ 141 ಕಾಳಜಿ ಕೇಂದ್ರಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದರು.
ಪ್ರವಾಹಕ್ಕೆ ಇದುವರೆಗೆ 542 ದೊಡ್ಡ ಜಾನುವಾರು ಮತ್ತು 373 ಚಿಕ್ಕ ಜಾನುವಾರಗಳಿಗೆ ಜೀವ ಹಾನಿಯಾಗಿದ್ದು, ಯಾವುದೇ ಮಾನವ ಹಾನಿಯಾಗಿಲ್ಲ. ಪ್ರಾಥಮಿಕ ವರದಿ ಪ್ರಕಾರ 3628 ಮನೆಗಳು ಭಾಗಶ: ಹಾನಿಗೆ ಒಳಗಾದರೆ 65 ಮನೆಗಳು ಸಂಪೂರ್ಣ ಹಾನಿಯಾಗಿವೆ. ಉಳಿದಂತೆ 10796 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿರುತ್ತದೆ.
ಭೀಕರ ಪ್ರವಾಹದಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.
ಹೊರ ಹರಿವಿನಲ್ಲಿ ಇಳಿಮುಖ: ಭೀಮಾ ನದಿ ಪಾತ್ರದಲ್ಲಿ ಪ್ರವಾಹಕ್ಕೆ ಕಾರಣವಾದ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜಿನಿಂದ ಹೊರ ಹರಿವಿನಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು, ಶುಕ್ರವಾರ ಸಂಜೆ 6 ಗಂಟೆಗೆ ಒಳಹರಿವಿನ ನೀರಿನ ಪ್ರಮಾಣ 42200 ಕ್ಯುಸೆಕ್ ಇದ್ದರೆ, ಹೊರ ಹರಿವಿನ ಪ್ರಮಾಣ ಕೇವಲ 25000 ಕ್ಯುಸೆಕ್ ಇದೆ.