ಪಟಾಕಿಗಳನ್ನು ಹಚ್ಚುವ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು

0
43

ಬೆಂಗಳೂರು: 2020ರ ನವೆಂಬರ್ ಮಾಹೆಯಲ್ಲಿ ಆಚರಿಸುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪಟಾಕಿ ಹಚ್ಚುವಾಗ ಕೆಲವು ಮುಂಜಾಗ್ರತಾ ಕ್ರಮಗಳ ತೆಗೆದುಕೊಳ್ಳಬೇಕಾಗಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ಸೂಚಿಸಿದೆ.

ಮಕ್ಕಳಿಗೆ ದೊಡ್ಡವರ ಸಮ್ಮುಖದಲ್ಲಿ ಪಟಾಕಿ ಹಚ್ಚಲು ತಿಳಿಸತಕ್ಕದ್ದು. ತೆರೆದ ಪ್ರದೇಶದಲ್ಲಿ ಪಟಾಕಿ ಹಚ್ಚುವುದು ಸುರಕ್ಷಿತ. ಯಾವುದೇ ಸಂದರ್ಭದಲ್ಲಿ ಮನೆಯೊಳಗೆ ಪಟಾಕಿ ಹಚ್ಚಬಾರದು.  ಆದಷ್ಟು ಮಟ್ಟಿಗೆ ಶರೀರಕ್ಕೆ ಹೊಂದಿಕೊಳ್ಳುವಂತಹ ಬಟ್ಟೆಗಳನ್ನು ಧರಿಸತಕ್ಕದ್ದು.  ಸುರ ಸುರ ಬತ್ತಿ ಇತ್ಯಾದಿಗಳನ್ನು ಶರೀರದಿಂದ ಆದಷ್ಟು ದೂರ ಹಿಡಿಯಬೇಕು. ಪಟಾಕಿ ಹಚ್ಚುವಾಗ ಅದರ ಮೇಲೆ ಬಾಗಬಾರದು.  ಸಾಧ್ಯವಾದಷ್ಟು ಮಟ್ಟಿಗೆ ಪಕ್ಕದಿಂದ ಹಚ್ಚತಕ್ಕದ್ದು. ಯಾವುದೇ ಪಾತ್ರೆಯೊಳಗೆ  ಅಥವಾ ಇಕ್ಕಟ್ಟಾದ ಸ್ಥಳಗಳಲ್ಲಿ ಪಟಾಕಿ ಹಚ್ಚಬಾರದು.  ಪಟಾಕಿಗಳನ್ನು ಜೇಬಿನಲ್ಲಿಡಬಾರದು.

Contact Your\'s Advertisement; 9902492681

ಯಾವುದೇ ಸಂದರ್ಭದಲ್ಲಿ ಪಟಾಕಿಗಳನ್ನು ಬೆಂಕಿಯ ಅಥವಾ ಉಷ್ಣತೆ ಹೆಚ್ಚಿರುವ ಸ್ಥಳಗಳಲ್ಲಿ ಇಡಬಾರದು ಹಾಗೂ ಪೊಟ್ಟಣಗಳನ್ನು ತೆರೆಯಬಾರದು.  ಹಚ್ಚಿರುವ ಪಟಾಕಿ ಸಿಡಿಯದಿದ್ದರೆ ಅದನ್ನು ಪುನರ್ ಪರೀಕ್ಷಿಸಲು ಪ್ರಯತ್ನಿಸಬಾರದು.

ಹೂ ಕುಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚಬಾರದು.  ರಾಕೆಟ್‍ಗಳನ್ನು ಬಳಸುವುದನ್ನು ಪೂರ್ಣವಾಗಿ ತಪ್ಪಿಸುವುದು ಉತ್ತಮ.  ಬೇರೆಯವರಿಗೆ ತೋರಿಸಿಕೊಳ್ಳಲು ಪಟಾಕಿ ಹಚ್ಚುವಾಗ ಅಪಾಯಕ್ಕೆ ಅವಕಾಶ ಕೊಡಬಾರದು.  ಪಕ್ಕದಲ್ಲಿ ಯಾವಾಗಲೂ ನೀರನ್ನು ಇಟ್ಟುಕೊಳ್ಳುವುದು ಸುರಕ್ಷಿತ.  ಆಕಸ್ಮಿಕವಾಗಿ ಸುಟ್ಟ ಗಾಯಗಳಾದರೆ ಕೂಡಲೇ ತಣ್ಣೀರನ್ನು ಸುರಿಯತಕ್ಕದ್ದು.

ಸಾಧ್ಯವಾದಷ್ಟು ಮಟ್ಟಿಗೆ ಸ್ನೇಹಿತರ ಜೊತೆ ಸೇರಿ ಸಾರ್ವಜನಿಕ ತೆರೆದ ಪ್ರದೇಶಗಳಲ್ಲಿ ಪಟಾಕಿ ಹಚ್ಚುವುದು ಸೂಕ್ತ. ಇದರಿಂದ ಎಲ್ಲರೂ ಸಂತೋಷಪಡಬಹುದು ಹಾಗೂ ಸುರಕ್ಷಿತ.  ಮಕ್ಕಳು ವಯಸ್ಸಾದವರು, ಖಾಯಿಲೆ ಇರುವವರು ಹಾಗು ಪ್ರಾಣಿಗಳನ್ನು ಗಮನಿಸಿ, ಅವರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸಿ. ಹೆಚ್ಚು ಶಬ್ದ ಬರುವ ಪಟಾಕಿಗಳನ್ನು ಆಸ್ಪತ್ರೆ ಮತ್ತು ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಬಳಸುವುದನ್ನು ತಪ್ಪಿಸಿ.

ದೇಶದಾದ್ಯಂತ ಹರಡಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಿ ಸುರಕ್ಷಿತ ದೀಪಾವಳಿ ಆಚರಿಸುವಂತೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here