ಸುರಪುರ: ಇಂದಿನ ಪೈಪೋಟಿ ಯುಗದಲ್ಲಿ ಮಕ್ಕಳು ಹೆಚ್ಚೆಚ್ಚು ಓದುವುದು ಅವಶ್ಯವಾಗಿದೆ,ಅದರಲ್ಲಿ ಗ್ರಂಥಾಲಯಗಳಿಗೆ ಬಂದು ಮಕ್ಕಳು ಓದನ್ನು ರೂಢಿಸಿಕೊಳ್ಳಬೇಕು.ಅದಕ್ಕಾಗಿ ಗ್ರಂಥಾಲಯಗಳು ಮಕ್ಕಳ ಓದಿಗೆ ಬೆಳಕಾಗಲಿ ಎಂದು ಅಜೀಂ ಪ್ರೇಮಜಿ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ್ ಅಭಿಪ್ರಾಯ ಪಟ್ಟರು.
ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯ ಸಪ್ತಾಹ ಹಾಗು ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿ,೬ ರಿಂದ ೧೮ ವರ್ಷದೊಳಗಿನ ಮಕ್ಕಳು ಗ್ರಂಥಾಲಯದಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಒಳ್ಳೊಳ್ಳೆಯ ಪುಸ್ತಕಗಳನ್ನು ತಮ್ಮ ಮನೆಗಳಿಗೆ ಕೊಂಡೊಯ್ಯುವ ಮೂಲಕ ಓದಬಹುದು,ಇಂತಹ ಉತ್ತಮವಾದ ಸಹಕಾರವನ್ನು ಗ್ರಂಥಾಲಯಗಳು ಕಲ್ಪಿಸಿರುವುದು ಮಕ್ಕಳಿಗೆ ವರದಾನವಾಗಿದೆ,ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.
ಸಾಂಕೇತಿಕವಾಗಿ ಹತ್ತು ಮಕ್ಕಳ ಹೆಸರುಗಳನ್ನು ಗ್ರಂಥಾಲಯದ ಸದಸ್ಯತ್ವಕ್ಕೆ ನೊಂದಾಯಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಪಂಚಾಯತಿ ಕಾರ್ಯದರ್ಶಿ ರಾಚಣ್ಣ ರಾಮಚಂದ್ರ ಮಲ್ಲಿಕಾರ್ಜುನ ವೆಂಕಟೇಶ ದೊಡ್ಡಪ್ಪಗೌಡ ಮಾನಪ್ಪ ಅಂಗನವಾಡಿ ಕಾರ್ಯಕರ್ತೆ ಸೋಪನಬಿ ಶಾಂತಮ್ಮ ಶಹನಾಜ್ ಹೇಮಾಬಾಯಿ ನಿಂಗಮ್ಮ ಹಾಗು ಆಲ್ದಾಳ ಗ್ರಾಮದ ಅನೇಕರು ಭಾಗವಹಿಸಿದ್ದರು.ಮುಖ್ಯಗುರು ಮೌನೇಶ ಪತ್ತಾರ ಸ್ವಾಗತಿಸಿದರು,ಗ್ರಂಥಪಾಲಕಿ ಸುಮಿತ್ರ ವಂದಿಸಿದರು.