ಕಲಬುರಗಿ: ಇಲ್ಲಿನ ಜನರ ಬಹುದಿನಗಳ ಬೇಡಿಕೆ ಆಗಿರುವ ಕಲಬುರಗಿ ನಗರ ರಾಜ್ಯದ ಉಪರಾಜಧಾನಿ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಾಂದಿ ಹಾಡಲು ಸರಕಾರ ಬದ್ಧವಾಗಿದ್ದರೆ ಕೂಡಲೇ ಕಲಬುರಗಿಯನ್ನು ರಾಜ್ಯದ ಎರಡನೆ ರಾಜಧಾನಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಬೇಕು. ಇಲ್ಲಿಯ ಜನರಿಗೆ ಕೆಲಸಕ್ಕಾಗಿ ದೂರದ ಈಗಿನ ರಾಜಧಾನಿ ಬೆಂಗಳೂರು ಸುಮಾರು 650 ಕಿಲೋಮೀಟರ್ ಇರುವುದರಿಂದ ಹೋಗಿ ಬರುವುದು ದುಬಾರಿ ಜೋತೆಗೆ ಸಮಯವು ಬೇಕಾಗುತ್ತದೆ.ಕಲಬುರಗಿ ಉಪ ರಾಜಧಾನಿ ಆದರೆ ಎಲ್ಲಾ ಉಪಕಚೇರಿ ಕಾರ್ಯನಿರ್ವಹಿಸುತ್ತವೆ.ಜನರಿಗೆ ಹಣವು ಉಳಿತಾಯ ಮತ್ತು ಹೆಚ್ಚು ಅನುಕೂಲವಾಗುತ್ತದೆ.
ಕಲಬುರಗಿ ನಗರ ಉಪ ರಾಜಧಾನಿಯಾಗಲು ಎಲ್ಲಾ ಅರ್ಹತೆ ಹೊಂದಿದೆ.ವಿಮಾನ ನಿಲ್ದಾಣ,ಕೇಂದ್ರೀಯ ವಿಶ್ವವಿದ್ಯಾಲಯ, ಮಿನಿ ವಿಧಾನಸೌಧ, ರೈಲ್ವೆ ನಿಲ್ದಾಣ, ಹೈಕೋರ್ಟ್,ಎರಡು ವಿಶ್ವವಿದ್ಯಾಲಯ, ಇಂಜಿನೀಯರಿಂಗ್ ಮತ್ತು ಮೇಡಿಕಲ್ ಕಾಲೇಜುಗಳು, ಶೈಕ್ಷಣಿಕ ವ್ಯಾಸಂಗ ಮಾಡಲು ಉನ್ನತ ಶಿಕ್ಷಣ ಸಂಸ್ಥೆಗಳು, ಸಧ್ಯದಲ್ಲೇ ನಿರ್ಮಾಣ ವಾಗುತ್ತಲಿರುವ ಅಂತಾರಾಷ್ಟ್ರೀಯ ಕ್ರೀಡಾಂಗಣ, ಪೊಲೀಸ್ ತರಬೇತಿ ಕೇಂದ್ರ,ಹೆಚ್ಕೇಸಿಸಿ ವಾಣಿಜ್ಯ ಮಂಡಳಿ ಹೀಗೆ ಹಲವು ಸೌಕರ್ಯ ಹೊಂದಿರುವ ಕಲಬುರಗಿ ಉಪರಾಜಧಾನಿ ಆದರೆ ಇಲ್ಲಿನ ಜನರಿಗೆ ಪ್ರತ್ಯೇಕತಾ ಭಾವನೆ ಹೋಗುತ್ತದೆ. ಇಲ್ಲವಾದರೆ ಪದೇ ಪದೇ ಪ್ರತ್ಯೇಕ ರಾಜ್ಯದ ಬೇಡಿಕೆಗಾಗಿ ಹೋರಾಟ ನಡೆಯುತ್ತಲೇ ಇರುತ್ತವೆ.
ಕಲಬುರಗಿ ನಗರ ಉಪರಾಜಧಾನಿ ಆದರೆ ಕೇವಲ ಇಲ್ಲಿಯ ಜನರಿಗಷ್ಷೇ ಅನುಕೂಲವಾಗದೇ ನೆರೆಯ ಜಿಲ್ಲೆಗಳಾದ ಬೀದರ, ಯಾದಗಿರಿ, ಬಿಜಾಪುರ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಜನರಿಗೆ ಅನುಕೂಲ ಆಗುತ್ತದೆ.ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಲಬುರಗಿ ರಾಜ್ಯದ ಉಪರಾಜಧಾನಿ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.