ಶಹಾಪುರ: ಸ್ಥಳೀಯ ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರಕರಣದ ತೀರ್ಪು ಕನ್ನಡದಲ್ಲಿ ನೀಡುತ್ತಿರುವುದು ಮಹತ್ವ ಬೆಳವಣಿಗೆಯಾಗಿದೆ. ಕನ್ನಡ ಭಾಷೆ ಉಳಿಸಿ ಬೆಳೆಯಿಸುವ ಕಾಯಕವನ್ನು ನ್ಯಾಯಾಲಯಗಳು ಮಾಡುತ್ತಲಿವೆ ಎನ್ನುವುದು ನಾವೆಲ್ಲರೂ ಗೌರವಿಸುವಂತೆ ಆಗಿದೆ. ಸೌಹಾರ್ದ ಬದುಕಿಗೆ ಭಾಷೆ ದಿಕ್ಸೂಚಿಯಾಗಿದೆ ಎಂದು ಸಾಹಿತಿ ಡಾ.ಬಸವರಾಜ ಇಜೇರಿ ತಿಳಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ “ಭಾಷಾ ಸೌಹಾರ್ದತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಕನ್ನಡ ಭಾಷೆಯ ಜತೆಗೆ ಅನ್ನ ನೀಡುವ ಭಾಷೆಯನ್ನು ಅನಿವಾರ್ಯವಾಗಿ ಕಲಿತು ವ್ಯವರಿಸಬೇಕಾಗುತ್ತದೆ.ಅದರಲ್ಲಿ ನಮ್ಮ ಗಡಿ ಭಾಗದಲ್ಲಿ ಉರ್ದು ಮಿಶ್ರಿತ ಭಾಷೆ ಸಿಹಿಯಾಗಿದ್ದರೆ ಕನ್ನಡ ಭಾಷೆ ಸುಲಿದ ಬಾಳೆ ಹಣ್ಣಿನಂತೆ ಇದೆ. ಆದರೆ ಕೆಲ ವರ್ಷದಿಂದ ಭಾಷೆಯಲ್ಲಿ ಅಧಿಕಾರ, ರಾಜಕೀಯ ಕಲುಷಿತ ವಾತಾವರಣದಿಂದ ಸಾರ್ವಜನಿಕವಾಗಿ ಕದನಕ್ಕೆ ಇಳಿಯುವಂತೆ ಆಗಿದೆ.
ಜನರ ಭಾವನೆಗೆಳಿಗೆ ಪ್ರಚೋದನೆ ನೀಡಿ ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿ.ಭಾಷೆ ಅಭಿವ್ಯಕ್ತಿ ಸ್ವಾತಂತ್ರವಾಗಿದೆ ನಿಜ ಅದರ ಹೆಸರಿನಲ್ಲಿ ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಅವರು ಸಲಹೆ ನೀಡಿದರು.
ಹಿರಿಯ ಶ್ರೇಣಿಯ ನ್ಯಾಯಾಲಯದ ನ್ಯಾಯಾಧೀಶರಾದ ಭಾಮಿನಿ ಮಾತನಾಡಿ,ಭಾಷೆಯ ಬಗ್ಗೆ ಕೀಳಿರಿಮೆ ಬೇಡ. ಸ್ಥಳೀಯ ನ್ಯಾಯಾಲಯಗಳಲ್ಲಿ ಹೆಚ್ಚಾಗಿ ಕಲಾಪಗಳು ಕನ್ನಡದಲ್ಲಿ ನಡೆಯುತ್ತವೆ. ಭಾಷಾ ಸೌಹಾರ್ದತೆಗೆ ನಾವೆಲ್ಲರೂ ಸದಾ ಸಹಕಾರ ನೀಡಬೇಕು ಎಂದರು.
ಪ್ರದಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ರಾಂಪುರೆ, ಸಂದೀಪ ದೇಸಾಯಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ವಿನಾಯಕ ಕೋಡ್ಲಾ, ದಿವ್ಯಾರಾಣಿ ಸೇರಿದಂತೆ ವಕೀಲರ ವೃಂದದವರು ಇದ್ದರು.