ಆಳಂದ: ಕಲಬುರಗಿಯ ವಿಶ್ವಜ್ಯೋತಿ ಪ್ರತಿಷ್ಠಾನವು ನವೆಂಬರ್ ೩೦ ರಂದು ತಾಲೂಕಿನ ಖಜೂರಿಯಲ್ಲಿ ಹಮ್ಮಿಕೊಂಡಿರುವ ಒಂದು ದಿನದ ‘ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ಕನ್ನಡದ ಕಟ್ಟಾಳು ಕೋರಣೇಶ್ವರ ಸಂಸ್ಥಾನದ ಮಠದ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಪಂ ಸದಸ್ಯ ಹರ್ಷಾನಂದ ಸುಭಾಷ ಗುತ್ತೇದಾರ ಹಾಗೂ ಪ್ರತಿಷ್ಠಾನ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಗದಗ ಜಿಲ್ಲೆಯರೋಣ ತಾಲೂಕಿನಸೂಟಿ ಗ್ರಾಮದ ಶಿವ ಭಕ್ತರಾದ ಶಿವಪುತ್ರಯ್ಯ ಅರಳಿಕಟ್ಟಿ ಹಿರೇಮಠ ಮತ್ತು ಶಾರದಾಂಬೆಯರ ಮೊದಲ ಮಗನಾಗಿ ಮುರುಘೇಂದ್ರ ಶ್ರೀಗಳು ೧೯೬೧ನೇ ಸೆಪ್ಟೆಂಬರ್ ೧ ರಂದು ಜನಿಸಿದರು. ಧಾರ್ಮಿಕ ಬೋಧನೆ ಶಿಕ್ಷಣ ಪಡೆದು ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆಮಾಡಿದ ಕೀರ್ತಿ ಶಾರೀಗಳಿಗೆ ಸಲ್ಲುತ್ತದೆ.
ಖಜೂರಿ ಶ್ರೀಗಳು ಸಂಗೀತ, ನಾಟಕ, ನೃತ್ಯ, ಕೃಷಿ, ಕಲೆ,ಸಂಸ್ಕೃತಿ ಹೀಗೆ ಅನೇಕ ರಂಗಗಳ ಮೇಲೆ ಉತ್ತಮ ಬೆಳಕು ಚೆಲ್ಲಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಗಡಿಭಾಗದ ಮರಾಠಿ ಭಾಷಿಕರನ್ನು ಮನಗಂಡ ಖಜೂರಿ ಶ್ರೀಗಳು ಕನ್ನಡದಲ್ಲಿಯೇ ಉಚಿತ ಶಿಕ್ಷಣ ನೀಡುವ ಮೂಲಕ ಕನ್ನಡಾಭಿಮನವನ್ನು ಕಳೆದ ಎರಡುವರೆ ದಶಕದಿಂದ ಮೂಡಿಸುತ್ತಾ ಬರುತ್ತಿದ್ದಾರೆ.
ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ಮಾತೃ ಭಾಷಾಭಿಮಾನದಿಂದ ತಮ್ಮ ನೇತೃತ್ವದಲ್ಲಿ ತಾಲೂಕಾ ಮಟ್ಟದ ಗಡಿನಾಡು ಕನ್ನಡಿಗರ ಸಮ್ಮೇಳನ, ನವೆಂಬರ್ ತಿಂಗಳಿನಲ್ಲಿ ಕನ್ನಡ ರಥೋತ್ಸವ, ಪ್ರಥಮ ಕೃಷಿ ಸಾಹಿತ್ಯ ಸಮ್ಮೇಳನ, ಉಚಿತ ಸಾಮೂಹಿಕ ಕಲ್ಯಾಣ ಮಹೋತ್ಸವ, ಪತ್ರಿಕೆ ಓದುಗರ ದಿನಾಚರಣೆ, ಮನೆಯಲ್ಲಿ ಮಹಾಮನೆ, ಪ್ರಥಮ ಗೀಗೀ ಸಮ್ಮೇಳನ, ಜನಪದ ಸಮ್ಮೇಳನ, ವಚನ ಸಾಹಿತ್ಯ ಸಮ್ಮೇಳನ ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಈ ಭಾಗದಲ್ಲಿ ಕನ್ನಡ ಕಿಂಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದೆರಡು ದಶಕದಿಂದ ಗಡಿ ಭಾಗದಲ್ಲಿ ಕನ್ನಡದ ವಾತಾವರಣ ಮೂಡಿಸುವಲ್ಲಿ ನಿರತರಾದ ಕನ್ನಡದ ಸ್ವಾಮಿ ಎಂದೇ ಖ್ಯಾತಿ ಪಡೆದಿರುವ ಖಜೂರಿಯ ಶ್ರೀ ಮುರುಘೇಂದ್ರ ಕೋರಣೇಸ್ವರ ಶಿವಯೋಗಿಗಳು ಅವರನ್ನು ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿರುವ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಶ್ರೀಗಳಿಗೆ ನಿಜವಾದ ಗೌರವ ಕೊಟ್ಟಂತಾಗಿದೆ.