ವಾಡಿ: ವಿವಿಧ ರೈತ-ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನ.೨೬ ರಂದು ಕರೆ ನೀಡಲಾಗಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಭಾಗವಹಿಸಿದ್ದು, ಅಂದು ಕಾರ್ಮಿಕ ನಗರಿ ವಾಡಿ ಪಟ್ಟಣದಲ್ಲಿಯೂ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಅಖಿಲ ಭಾರತ ಮುಷ್ಕರದ ಬಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು ನ.೨೬ ರಂದು ನಡೆಯಲಿರುವ ಮುಷ್ಕರದಲ್ಲಿ ಎಲ್ಲಾ ದುಡಿಯುವ ಜನಗಳ ದನಿ ಮಾರ್ಧನಿಸಲಿದೆ. ಶೋಷಕರ ಪರ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವ ಕಾರ್ಮಿಕ ವಿರೋಧಿ ಕೇಂದ್ರ ಸರಕಾರದ ವಿರುದ್ಧ ಜನಾಕ್ರೋಶ ಭುಗಿಲೇಳಲಿದೆ. ಅಂದು ಬೆಳಗ್ಗೆ ೧೧:೩೦ಕ್ಕೆ ಪಟ್ಟಣದ ಕುಂದನೂರ ಚೌಕ್ ದಿಂದ ಕಾಮ್ರೇಡ್ ಶ್ರೀನಿವಾಸಗುಡಿ ವೃತ್ತರದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಕಟ್ಟಡ ಕಾರ್ಮಿಕರು, ಎಸಿಸಿ ಗುತ್ತಿಗೆ ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಮತ್ತು ಹಾಸ್ಟೆಲ್ ಅಡುಗೆ ಸಹಾಯಕರು, ರೈತರು, ಅನುದಾನ ರಹಿತ ಖಾಸಗಿ ಶಾಲೆಯ ಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಯುವಜನರು ಸಾವಿರಾರು ಸಂಖ್ಯೆಯಲ್ಲಿ ಬಂದು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಆಶಾ ಕಾರ್ಯಕರ್ತೆಯರಾದ ರತ್ನಮ್ಮ ಕಟ್ಟಿಮನಿ, ಶಿವಲೀಲಾ ಮಾಶಾಳ ವಿಜುಬಾಯಿ ರಾಠೋಡ, ಶಾಂತಾಬಾಯಿ ವಾಡೇಕರ, ಆಶಾ ರಾಠೋಡ, ಮಾಣಿಕೆಮ್ಮಾ, ಅರುಣಾ ಹಾಗೂ ರೇಣುಕಾ ಅವರು ಹೋರಾಟದ ಪೋಸ್ಟರ್ ಬಿಡುಗಡೆಯಲ್ಲಿ ಪಾಲ್ಗೊಂಡಿದ್ದರು.
ಮುಷ್ಕರದ ಬೇಡಿಕೆಗಳು: ಹಣಕಾಸು ವಲಯ ಸೇರಿದಂತೆ ರೈಲ್ವೇ, ವಿಮಾನಯಾನ, ಆರೋಗ್ಯ, ಶಿಕ್ಷಣ, ವಿದ್ಯುತ್, ದೂರ ಸಂಪರ್ಕ, ಬ್ಯಾಂಕ್, ವಿಮಾ ಮತ್ತಿತರ ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಆರ್ಡಿನೆನ್ಸ್ ಕಾರ್ಖಾನೆಗಳು, ಬಂದರು ಮುಂತಾದ ಸರ್ಕಾರದ ಉತ್ಪಾದನಾ ಮತ್ತು ಸೇವಾ ಸಂಸ್ಥೆಗಳ ಸಾಂಸ್ಥೀಕರಣವನ್ನು ನಿಲ್ಲಿಸಬೇಕು. ಎಲ್ಲಾ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ವರ್ಷಕ್ಕೆ ೨೦೦ ದಿನಗಳ ಕೆಲಸವನ್ನು ವರ್ಧಿತ ವೇತನದಲ್ಲಿ ಒದಗಿಸಬೇಕು ಹಾಗೂ ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು.
ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ರೂ.೭೫೦೦ ನಗದು ವರ್ಗಾವಣೆ ಮಾಡಬೇಕು. ಎಲ್ಲಾ ಅಗತ್ಯವಿರುವವರಿಗೆ ತಿಂಗಳಿಗೆ ೧೦ ಕೆ.ಜಿ. ಉಚಿತ ಪಡಿತರ ಒದಗಿಸಬೇಕು. ಆಶಾ-ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಗುತ್ತಿಗೆ-ಹೊರಗುತ್ತಿಗೆ-ದಿನಗೂಲಿ-ನಿಶ್ಚಿತ ವೇತನ ಇತ್ಯಾದಿ ಹೆಸರಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಾರ್ಮಿಕರು ಮತ್ತು ನೌಕರರನ್ನು ಖಾಯಂ ಗೊಳಿಸಬೇಕು. ಅದು ಆಗುವವರೆಗೆ ಮಾಸಿಕ ರೂ. ೨೧೦೦೦ ವೇತನ ನೀಡಬೇಕು. ಸರ್ಕಾರಿ ಮತ್ತು ಸಾರ್ವಜನಿಕ ರಂಗದ ಘಟಕಗಳ ನೌಕರರ ಒತ್ತಾಯದ ಅಕಾಲಿಕ ನಿವೃತ್ತಿಯ ಮೇಲಿನ ಕ್ರೂರ ಸುತ್ತೋಲೆ ಹಿಂತೆಗೆದುಕೊಳ್ಳಬೇಕು. ಎಲ್ಲರಿಗೂ ಪಿಂಚಣಿ ಒದಗಿಸಿ ಎನ್‌ಪಿಎಸ್ ರದ್ದು ಮಾಡಬೇಕು ಮತ್ತು ಹಿಂದಿನ ಪಿಂಚಣಿ ಯೋಜನೆಯನ್ನು ಪುನಹ ಸ್ಥಾಪಿಸಿ ಇಪಿಎಸ್-೯೫ ಸುಧಾರಿಸಬೇಕು.