ಯಾದಗಿರಿ: ಅಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಎದುರುಗಡೆ ಮಹರ್ಷಿ ವಾಲ್ಮೀಕಿ ಮಂದಿರವನ್ನು ನಿರ್ಮಿಸಿದರೆ ರಾಮ ಮಂದಿರಕ್ಕೆ ಇನ್ನಷ್ಟು ಮೆರಗು ಬರುತ್ತದೆ. ವಾಲ್ಲೀಕಿ ಇಲ್ಲದೆ ರಾಮಾಯಣವಿಲ್ಲ ಎಂಬುವುದು ಆಳುವ ವರ್ಗ ಅರಿತುಕೊಳ್ಳಬೇಕು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಶಹಾಪುರ ನಗರದ ಅತಿಥಿಗೃಹದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ವಾಲ್ಮೀಕಿ ಸಮುದಾಯದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ7.5 ಹೆಚ್ಚಿಸುವ ಬಗ್ಗೆ ಡಿಸೆಂಬರ ಒಳಗೆ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ ಹಿನ್ನಲೆಯಲ್ಲಿ ನಾವೆಲ್ಲರೂ ಕಾದು ನೋಡುವಂತೆ ಆಗಿದೆ. ಕೊಟ್ಟ ಮಾತು ಸರ್ಕಾರ ಉಳಿಸಿಕೊಳ್ಳದಿದ್ದರೆ ಮುಂದೆ ಹೋರಾಟ ಹಾದಿ ಕಣ್ಣಮುಂದೆ ಇದೆ. ತಾವೆಲ್ಲರೂ ಪಕ್ಷಾತೀತವಾಗಿ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಎಲ್ಲರು ನನಗೆ ಧ್ವನಿಯಾಗಬೇಕು ಎಂದರು.
ರಾಜನಹಳ್ಳಿಲ್ಲಿ ಫೆ 8 ಮತ್ತು9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ.ಅಂದಿನ ಕಾರ್ಯಕ್ರಮಕ್ಕೆ ತಪ್ಪದೆ ಹಾಜರಾಗಬೇಕು. ಜಾತ್ರೆಗೆ ಆಗಮಿಸುವ ಸಮುದಾಯದವರು ಕಡ್ಡಾಯವಾಗಿ ಮಾಸ್ಕ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಕಾರ್ಯದರ್ಶಿ ಹಣಮಂತರಾಯ ಟೋಕಾಪುರ ಹಾಗೂ ಸಮಾಜದ ಮುಖಂಡರಾದ ರಾಮಚಂದ್ರ ಕಾಶಿರಾಜ, ತಮ್ಮಣ್ಣ ರಾಂಪುರ, ಆರ್.ಚನ್ನಬಸ್ಸು ವನದುರ್ಗ, ಹನುಮೇಗೌಡ ಮರಕಲ್, ಸತ್ಯನಾರಾಯಣ ಅನವಾರ, ಶೇಖರ ದೊರೆ ಕಕ್ಕಸಗೇರಾ, ಶೇಖಪ್ಪ ಯಕ್ಷಿಂತಿ, ಮಾನಪ್ಪ ನಾಗನಟಗಿ, ರಾಘವೇಂದ್ರ ಯಕ್ಷಿಂತಿ, ತಿರುಪತಿ ಯಕ್ಷಿಂತಿ, ಸಂಗಮೇಶ ನುಚ್ಚಿನ, ಈರಣ್ಣ ಮುಡಬೂಳ, ಮಹಾದೇವಪ್ಪ ಶಾರದಹಳ್ಳಿ, ಭೀಮಣ್ಣ ಬೂದನೂರ,ಸುಭಾಸ ರಾಂಪುರ, ನಾಗೇಂದ್ರ ಬಳಬಟ್ಟಿ ಇದ್ದರು.