ಶಹಾಬಾದ:ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈಜ್ಞಾನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದಂತಹ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ನಗರಸಭೆ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.
ಅವರು ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಲಾದ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸವನ್ನು ಪಡೆದ ಅಂಬೇಡ್ಕರ್ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೇರಿಕಾ, ಇಂಗ್ಲೆಂಡ್, ಐರ್ಲಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನ ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು.
ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ ಮಾತನಾಡಿ, ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬಾಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆಯನ್ನು ಅರಿತು ನಡೆಯಬೇಕಾಗಿದೆ ಎಂದರು.ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಉದ್ಘಾಟಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಎಇಇ ಪುರುಷೋತ್ತಮ, ಕಂದಾಯ ಅಧಿಕಾರಿ ಸುನೀಲಕುಮಾರ, ಆರೋಗ್ಯ ನಿರೀಕ್ಷಕರಾದ ಶೀವರಾಜಕುಮಾರ, ಶರಣು, ಸಾಯಿಬಣ್ಣ ಸುಂಗಲಕರ್ ಸೇರಿದಂತೆ ನಗರಸಭೆಯ ಸದಸ್ಯರು ಇದ್ದರು.