ಕಲಬುರಗಿ: ಕೃಷಿ ಕಾಯ್ದೆಗಳನ್ನು ವಾಪಸ್ಸಿಗೆ ಆಗ್ರಹಿಸಿ ದೆಹಲಿ ಚಲೋ ಪ್ರತಿಭಟನಾ ರ್ಯಾಲಿ ಮಾಡುತ್ತಿರುವ ರೈತರನ್ನು ತಡೆ ಹಿಡಿದು ಪೊಲೀಸರಿಂದ ದಾಳಿ ಮಾಡಿಸಿದ್ದನ್ನು ಖಂಡಿಸಿ, ನಗರದ ಜಗತ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರು ಭಾನುವಾರ ರಾತ್ರಿ ಪಂಜಿನ ಪ್ರತಿಭಟನೆ ಮಾಡಿದರು.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸುತ್ತಿರುವ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ದೇಶಾದ್ಯಂತ ರೈತರು ಕೈಗೊಂಡ ದೆಹಲಿ ಚಲೋ ಪ್ರತಿಭಟನೆಯನ್ನು ತಡೆಯಲು ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ರೈತರು ಮಾಡುತ್ತಿರುವ ರ್ಯಾಲಿ ಸಂದರ್ಭದಲ್ಲಿ ಅವರನ್ನು ತಡೆಯಲು ಪೊಲೀಸರಿಂದ ಜಲಫಿರಂಗಿ ಪ್ರಯೋಗ, ಅಶ್ರುವಾಯು ಸಿಡಿಸಿ, ರೈತರ ಮೇಲೆ ದಾಳಿ ಮಾಡಿದ್ದು ನಿಜಕ್ಕೂ ದೇಶದಲ್ಲಿ ದಿಗ್ಭ್ರಮೆ ಮೂಡಿಸಿದೆ. ಈ ದಾಳಿ ಕೋಟ್ಯಂತರ ರೈತ ಕುಟುಂಬಗಳಿಗೆ ಅಪಮಾನಕಾರವಾಗಿದೆ, ಅನ್ನದಾತನ ಮೇಲೆ ಕ್ರೌರ್ಯ ಎಸೆಗುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಧಿಕ್ಕಾರವಿದೆ ಈ ಕೂಡಲೇ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಶರಣಬಸಪ್ಪ ಮಮಶೆಟ್ಟಿ ಅವರು, ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಬಂಧಿಸಿದ ಪೊಲೀಸರು ಕೂಡಲೇ ಬಿಡುಗಡೆ ಮಾಡಬೇಕು, ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ರೈತರನ್ನು ಬೀದಿಗೆ ತರುವಂತಹ ಪರಿಸ್ಥಿತಿ ಸರ್ಕಾರಗಳು ಮಾಡುತ್ತಿವೆ, ಇದು ನಿಜಕ್ಕೂ ದುರ್ದೈವ, ರೈತರ ಪ್ರತಿಭಟನೆ ಹತ್ತಿಕ್ಕುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಯನ್ನು ರೈತ ಸಂಘಟನೆ ಖಂಡಿಸುತ್ತದೆ, ಶೀಘ್ರವಾಗಿ ಕರಾಳ ಮರಣ ಶಾಸನಗಳನ್ನು ಕೈ ಬಿಡಬೇಕು, ಇಲ್ಲದಿದ್ದರೇ ರಾಜ್ಯದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಪಂಜಿನ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಅಲ್ತಾಫ್ ಇನಾಮನ್ದಾರ, ಜಾವೇದ್ ಮುಗಳಿಕರ್, ಎಂ.ಬಿ ಸಜ್ಜನ್, ಕಾಶೀನಾಥ್ ಅಂಬಲಗಿ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ಅಶೋಕ್ ಮ್ಯಾಗೇರಿ ಸೇರಿದಂತೆ ಹಲವಾರು ಹೋರಾಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.