ಸುರಪುರ: ನಗರದ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಶ್ರೀ ಸಿದ್ಧಿ ವಿನಾಯಕ ಮಹಿಳಾ ಮಂಡಳ ಬೊಮ್ಮನಗುಡ್ಡ ಮತ್ತು ಅರುಣ್ ಪ್ರಕಾಶನ ಸಂಸ್ಥೆಯ ಜಂಟಿಯಾಗಿ ಏರ್ಪಡಿಸಿದ್ದ ಆನಲೈನ್‌ನಲ್ಲಿ ರಾಜ್ಯ ಮಟ್ಟದ ಗಜಲ್ ಮತ್ತು ಕವಿಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಬಳ್ಳಾರಿಯ ಖ್ಯಾತ ಸಾಹಿತಿಗಳಾದ ಡಾ: ರೇವಣ್ಣ ಬಳ್ಳಾರಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ,ಇಂದು ಯುವ ಸಾಹಿತಿಗಳು ಸತ್ವ ರಹಿತವಾದ ಸಾಹಿತ್ಯ ರಚಿಸುವತ್ತ ಮಗ್ನರಾಗಿದ್ದಾರೆ,ಹೆಚ್ಚು ಓದದೆ ಕೇವಲ ಫೇಸಬುಕ್ ವಾಟ್ಸ್ಯಾಪ್‌ಗಳಲ್ಲಿ ಬರೆಯುವದು ಸಾಹಿತ್ಯ ಎಂದುಕೊಂಡಂತೆ ಬರೆಯುತ್ತಿರುವುದರಿಂದ ಮೌಲ್ಯಯುತವಾದ ಸಾಹಿತ್ಯ ರಚನೆಗೊಳ್ಳುತ್ತಿಲ್ಲ,ಯುವ ಜನಾಂಗ ಮೋಬೈಲ್ ಟಿವಿಗಳಿಗಿಂದ ಕೃತಿಯ ಓದಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ,ಕೊರೊನಾ ಹಾವಳಿಯಿಂದ ಸಾಹಿತ್ಯ ಚಟುವಟಿಕೆಗಳು ಕಡಿಮೆಯಾಗಿವೆ,ಇಂತಹ ಸಂದರ್ಭದಲ್ಲಿ ಎರಡೂ ಸಂಸ್ಥೆಗಳು ಆನ್ಲೈನ್ ಮೂಲಕ ರಾಜ್ಯ ಮಟ್ಟದ ಘಜಲ್ ಮತ್ತು ಕವಿತೆ ವಾಚನಕ್ಕೆ ಅವಕಾಶ ಮಾಡಿ ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ.ಅಲ್ಲದೆ ಇಂದಿನ ಯುವ ಪೀಳಿಗೆ ಜನಪದ ಸಾಹಿತ್ಯವನ್ನು ಓದುವ ಮತ್ತು ಅರಿಯುವತ್ತ ಮುಂದಾಗಬೇಕು ಅಂದಾಗ ಸಾಹಿತ್ಯದ ಒಳಹು ಹೆಚ್ಚಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗದ ಸುಮಾರು ನಲವತ್ತಕ್ಕೂ ಹೆಚ್ಚು ಜನ ಸಾಹಿತಿಗಳು ತಮ್ಮ ಕವನಗಳನ್ನು ಮತ್ತು ಘಜಲ್‌ಗಳನ್ನು ವಾಚಿಸಿದರು.ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು,ದೊಡ್ಡಪ್ಪ ನಿಷ್ಠಿ ಜಹಾಗಿರದಾರ್ ಉಪಸ್ಥಿತರಿದ್ದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶುಭಾಶ್ಚಂದ್ರ ಕೌಲಗಿ ಬಸವರಾಜ ಜಮದ್ರಖಾನಿ ಪ್ರಕಾಶ ಅಂಗಡಿ ಕನ್ನೆಳ್ಳಿ ವೇದಿಕೆ ಮೇಲಿದ್ದರು.ಬೋರಮ್ಮ ಯಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಜಯಲಕ್ಷ್ಮೀ ಕಡ್ಲೆಪ್ಪನವರ ಮಠ ಹಾಗು ವಿಜಯಲಕ್ಷ್ಮೀ ಯಾದವ ಸ್ವಾಗತ ಗೀತೆ ಹಾಡಿದರು, ಸುಜಾತಾ ಹಳ್ಳದ ಸ್ವಾಗತಿಸಿದರು,ದೇವು ಹೆಬ್ಬಾಳ ನಿರೂಪಿಸಿದರು ಹಾಗು ವಿರೇಶ ಶಿವಸಿಂಪಿ ವಂದಿಸಿದರು.