ರಾಯಚೂರು : ರೈತರಿಗೆ ಸಂಬಂಧಿಸಿದ ರೈತ ವಿರೋಧಿ ಕೃಷಿ, APMC ಕಾಯಿದೆ ಮತ್ತು ಭೂ ಕಾಯ್ದೆಗಳನ್ನು ವಿರೋಧಿಸಿ ಮತ್ತು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಮೋದಿ ಸರ್ಕಾರ ಮಾಡುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ದೆಹಲಿ, ಪಂಜಾಬ್, ಹರಿಯಾಣ ಸೇರಿ ದೇಶದ ನಾನಾ ಭಾಗಗಳಲ್ಲಿ ಮಾಡುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ AIKSC, CITU, SFI, KRRS, AIAWU, KJS, DHS ಸೇರಿದಂತೆ ವಿವಿಧ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಇಂದು ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಸ್ಥಾನಿಕ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಕೆ.ಜಿ.ವಿರೇಶ, ಡಿ.ಎಸ್, ಶರಣ ಬಸವ, ಕುಮಾರ್ ಸಮತಳ, ಎಚ್, ಪದ್ಮಾ, ಶಿವಕುಮಾರ ಮ್ಯಾಗಳಮನಿ, ಖಾಜಾ ಅಸ್ಲಾಂ ಸೇರಿ ಅನೇಕರು ಮಾತನಾಡಿ ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಕೂಡಲೇ ವಾಪಸು ಪಡೆದು ರೈತರ ಹಿತ ಕಾಪಾಡಬೇಕು, ಹೋರಾಟ ನಿರತ ರೈತರೊಂದಿಗೆ ಮಾತುಕತೆ ಮಾಡಿ ರೈತ, ಕಾರ್ಮಿಕ ಮತ್ತು ಜನತೆಯ ಬದುಕಿನ ರಕ್ಷಣೆ ಮುಂದಾಗಬೇಕು ನಿರ್ಲಕ್ಷ್ಯ ತೋರಿದಲ್ಲಿ ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಇಡೀ ದೇಶವ್ಯಾಪಿ ಹೋರಾಟ ಬಲಗೊಳ್ಳಿಸಬೇಕಾಗುತ್ತದೆಂದು ಎಚ್ಚರಿಕೆಯನ್ನು ನೀಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಪ್ರವೀಣ್ ರೆಡ್ಡಿ ಗುಂಜಳ್ಳಿ, ಲಿಂಗರಾಜ ಕಂದಗಲ್, ಮಾರೆಪ್ಪ ಹರವಿ, ಬಸವರಾಜ ಗಾರಲದಿನ್ನಿ, ವರಲಕ್ಷ್ಮೀ, ವೈಜನಾಥ್, ಜುನೇದ್ ವಕೀಲ, ಮಿಥುನ್ ರಾಜ್ ಸೇರಿ ಅನೇಕರಿದ್ದರು.