ಸುರಪುರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ’ವರ್ಷದ ವ್ಯಕ್ತಿ’ಯಾಗಿ ’ಬಸವರಾಜ ಪಂಜಗಲ್’ ಅವರು ಆಯ್ಕೆಯಾಗಿದ್ದಾರೆ ಎಂದು ಸುರಪುರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಅವರು ತಿಳಿಸಿದ್ದಾರೆ.
ಈ ಕುರಿತು ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ನೀಡುವ ಈ ’ವರ್ಷದ ವ್ಯಕ್ತಿ’ ಪ್ರಶಸ್ತಿಯು ರಾಜ್ಯದಲ್ಲಿಯೇ ವಿಶಿಷ್ಟವಾದುದಾಗಿದೆ. ಸುಮಾರು ಎರಡು ದಶಕಗಳಿಂದಲೂ ಸುರಪುರ ಕಸಾಪ ಮಾತ್ರ ಇಡೀ ರಾಜ್ಯದಲ್ಲಿ ಇಂತಹ ಪ್ರಶಸ್ತಿಯನ್ನು ಸಾಧಕರನ್ನು ಗುರುತಿಸಿ ನೀಡುತ್ತ ಬಂದಿದೆ.
ಈ ಬಾರಿ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ರಂಗಭೂಮಿಯ ನಟ, ನಾಟಕಕಾರ ಬಸವರಾಜ ಪಂಜಗಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪಂಜಗಲ್ ಅವರು ಸುಮಾರು ೭೫ ನಾಟಕಗಳನ್ನು ರಚಿಸಿದ್ದು, ಕಳೆದ ನಾಲ್ಕು ದಶಕಗಳಿಂದಲೂ ಇವರು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಿರುತೆರೆಯ ಹಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.
ಸನ್ಮಾನ: ಇದೇ ಸಂದರ್ಭದಲ್ಲಿ ಸಿನೇಮಾ ನಟ, ರಂಗಭೂಮಿ ಕಲಾವಿದ, ನ್ಯಾಯವಾದಿ, ಹೋಮಗಾರ್ಡ್ಸ ಕಂಪನಿ ಕಮಾಂಡೆಂಟರಾದ ಯಲ್ಲಪ್ಪ ಹುಲಿಕಲ್ ಅವರಿಗೆ ’ಬಸವಜ್ಯೋತಿ’ ಸದ್ಭಾವನಾ ಪ್ರಶಸ್ತಿ ದೊರಕಿದ್ದಕ್ಕಾಗಿ ಎಲ್ಲಾರೂ ಸೇರಿ ಸನ್ಮಾನಿಸಿ ಗೌರವಿಸಿದರು.
ಸಭೆಯಲ್ಲಿ ಕಸಾಪ ಮಾಜಿ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ, ಶಾಂತಪ್ಪ ಬೂದಿಹಾಳ, ಬೀರಣ್ಣ ಬಿ.ಕೆ.ಆಲ್ದಾಳ, ನಿಂಗಣ್ಣ ಚಿಂಚೋಡಿ, ಸೋಮರೆಡ್ಡಿ ಮಂಗ್ಯಾಳ, ಎಚ್.ರಾಠೋಡ್, ಮಹಾಂತೇಶ ಗೋನಾಲ, ಶರಣಬಸಪ್ಪ ಯಾಳವಾರ, ಎ.ಕಮಲಾಕರ, ವೆಂಕಟೇಶಗೌಡ ಪಾಟೀಲ, ಪ್ರಕಾಶ ಅಲಬನೂರ, ಮುದ್ದಪ್ಪ ಅಪ್ಪಾಗೋಳ, ಯಲ್ಲಪ್ಪ ಹುಲಕಲ್ಲ, ಸಿದ್ಧಲಿಂಗಯ್ಯಸ್ವಾಮಿ ಕಡ್ಲೆಪ್ಪಮಠ, ಕನಕಪ್ಪ ವಾಗಣಗೇರಿ, ನಬೀಲಾಲ ಮಕಾನದಾರ, ಗೋಪಣ್ಣ ಯಾದವ, ಕುಮಾರಸ್ವಾಮಿ ಗುಡ್ಡೋಡಗಿ, ರಾಜಶೇಖರ ದೇಸಾಯಿ, ರಾಘವೇಂದ್ರ ಭಕ್ರಿ ಭಾಗವಹಿಸಿದ್ದರು. ಮಹಾದೇವಪ್ಪ ಗುತ್ತೇದಾರ ನಿರೂಪಿಸಿ ವಂದಿಸಿದರು.