ಕಲಬುರಗಿ: ಭಾರತೀಯ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಪ್ರಾಚೀನ ಕಾಲದಲ್ಲಿ ರಾಜರ ಆಸ್ಥಾನಗಳಲ್ಲಿ ಸಂಗೀತ ಕಲಾವಿದರು ಆಶ್ರಯ ಪಡೆದು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಂಗೀತ ಕೇಳುವುದರಿಂದ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ ಎಂದು ಹಿರಿಯ ಮಕ್ಕಳ ಸಾಹಿತಿಗಳಾದ ಎ.ಕೆ ರಾಮೇಶ್ವರ ಅವರು ಹೇಳಿದರು.
ನಗರದ ನಾಗಮಾಣಿಕ್ಯ ಎಂ.ಎಸ್.ಡಬ್ಲ್ಯೂ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಇತ್ತೀಚೆಗೆ ನಡೆದ ಗುರು-ಶಿಷ್ಯ ಪರಂಪರೆ ಸುಗಮ ಸಂಗೀತ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಸುರೇಶ ಶರ್ಮಾ ಅವರು, ಇಂದಿನ ಯುವಕರು ಸಂಗೀತ ಕಲೆಯನ್ನು ರಕ್ಷಿಸಲು ಮುಂದಾಗಬೇಕು. ಜನಪದ ಸಂಗೀತವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಪಾಶ್ಚಿಮಾತ್ಯ ಸಂಗೀತದ ಮೊರೆ ಹೋಗದೆ ದೇಶಿ ಸಂಸ್ಕøತಿಯ ಸಂಗೀತ ಮತ್ತು ಜಾನಪದ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರು ಮಾತನಾಡಿ, ಗುರು ಶಿಷ್ಯ ಪರಂಪರೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಸುಗಮ ಸಂಗೀತ ಕಲಿಯಲು ಮುಂದೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗುರು-ಶಿಷ್ಯ ಪರಂಪರೆ ಕಾರ್ಯಕ್ರಮದ ಸುಗಮ ಸಂಗೀತ ಶಿಕ್ಷಕ ಸಿದ್ಧಾರ್ಥ ಡಿ. ಚಿಮ್ಮಾಇದ್ಲಾಯಿ ಅವರು ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಪ್ರೊ.ಎಂ.ಬಿ.ಅಂಬಲಗಿ, ಎಂ.ಎಸ್.ಡಬ್ಲ್ಯೂ. ಕಾಲೇಜಿನ ಪ್ರಾಚಾರ್ಯ ಮಹೇಶ ಮಾಡಗಿ ಸೇರಿದಂತೆ ಇನ್ನಿತರರು ಇದ್ದರು.