ಯಾದಗಿರಿ : ಬಿಎಸ್‌ಎನ್‌ಎಲ್ ದಶಕಗಳಿಂದ ಹಳ್ಳಿಗಾಡಿನ ಬಡಜನರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.
ಜಿಲ್ಲಾದ್ಯಂತ 4ಜಿ ತರಂಗಗಳನ್ನು ಬಲಪಡಿಸಿ ಉತ್ತಮ ಸೇವೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ (K V S) ಯಾದಗಿರಿ ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇರುವ ಬಿಎಸ್ಎನ್ಎಲ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳು 3ಜಿ ಹಾಗೂ 4ಜಿ ತರಂಗಗಳನ್ನು ನೀಡಿ ಸೇವೆ ನೀಡುವ ಸಂದರ್ಭದಿಂದಲೂ ಬಿಎಸ್‌ಎನ್‌ಎಲ್ ನ ತರಂಗಗಳು ನವೀಕರಣಗೊಳ್ಳದೆ (ಅಪ್ಡೇಟ್) ಹಿಂದೆ ಉಳಿದಿದ್ದು ವಿಷಾಧಕರ ಆಗಿದೆ ಎಂದು ತಿಳಿಸಿದ್ದಾರೆ.
ಇದೀಗ 5ಜಿ ತರಂಗಗಳನ್ನು ಜಿಯೋ ಕಂಪನಿಗೇ ಮೊದಲು ನೀಡುವ ಸುದ್ಧಿ ನಮಗೆ ಆಘಾತ ನೀಡಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಲಗೊಳ್ಳದೇ ಖಾಸಗೀ ವ್ಯಕ್ತಿಯ ಲಾಭಕ್ಕಾಗಿನ ವ್ಯವಸ್ಥೆ ಅಪಾಯಕಾರಿಯಾಗಿದೆ. ಹಾಗಾಗಿ ನಿಮ್ಮ ವ್ಯಾಪ್ತಿಯಲ್ಲಿ ಬರುವ ನಗರ-ಹಳ್ಳಿಗಳಲ್ಲಿಯಾದರೂ ಬಿಎಸ್‌ಎನ್‌ಎಲ್ ತರಂಗಗಳನ್ನು ಉತ್ತಮಗೊಳಿಸಿದರೆ ದೇಶಪ್ರೇಮಿ ವಿದ್ಯಾರ್ಥಿ-ಯುವಜನರಾದ ನಾವು ಬಿಎಸ್‌ಎನ್‌ಎಲ್ ಸೇವೆಯನ್ನು ಬಳಸಲು ಸಿದ್ಧರಿದ್ದೇವೆ ನೂರಾರು ಯುವಜನರನ್ನು ಬಿಎಸ್‌ಎನ್‌ಎಲ್ ಗೆ ಪೋರ್ಟ್ ಮಾಡಿಸುವ ಆಂದೋಲನವನ್ನು ಮಾಡಲು ತಯಾರಿದ್ದೇವೆ ಮತ್ತು ರಾಜ್ಯದಾದ್ಯಂತ ಈ ಆಂದೋಲನ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕರಾದ ಮಲ್ಲಿಕಾರ್ಜುನ್ ಅಬ್ಬೆತುಮಕೂರು, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ರಾಜೇಂದ್ರ ರಾಜವಾಳ, ಬಾಬು, ವಿಶ್ವನಾಥ್ ,ಭೀಮಶಂಕರ್ ಮುಂತಾದವರು ಪಾಲ್ಗೊಂಡಿದ್ದರು.