ಕೋವಿಡ್ ನಿರ್ಮೂಲನೆಯಾಗುವವರೆಗೂ ಮುಂಜಾಗ್ರತಾ ಕ್ರಮ ಅನುಸರಿಸಬೇಕು: ಡಾ. ಪಿ. ರಾಜಾ

0
25

ಕಲಬುರಗಿ: ಕೋವಿಡ್ ಮುಕ್ತವಾಗುವವರೆಗೂ ಸಾರ್ವಜನಿಕರು ಆರೋಗ್ಯದ ಹಿತದೃಷ್ಟಿಯಿಂದ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ. ಪಿ. ರಾಜಾ ಅವರು ಕರೆ ನೀಡಿದರು.

ಸೋಮವಾರ ನಗರದ ಡಾ. ಎಸ್.ಎಮ್.ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ವತಿಯಿಂದ ನಡೆದ ಕಲಬುರಗಿ ವಿಭಾಗ ಮಟ್ಟದ ಜಾನಪದ ಕಲಾ ತಂಡಗಳಿಗೆ ತರಬೇತಿ ಕಾರ್ಯಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕೋವಿಡ್ ಸಾಂಕ್ರಾಮಿಕ ರೋಗದಿಂದ ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಕೋವಿಡ್ ಸುರಕ್ಷತಾ ಕ್ರಮಗಳಾದ ಮಾಸ್ಕ್, ಸ್ಯಾನಿಟೈಜರ್ ಬಳಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಈ ಕುರಿತು ಜನರಿಗೆ ಅರಿವು ಮೂಡಿಸುವಲ್ಲಿ ಕಲಾ ತಂಡಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಅವರು ಹೇಳಿದರು.

ಕೋವಿಡ್‌ನಿಂದಾಗಿ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳು ಕುಂಠಿತವಾಗಿದ್ದು, ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವಲ್ಲಿ ಯಶಸ್ವಿಯಾಗಬೇಕು ಎಂದು ಅವರು ತಿಳಿಸಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಸಹ ನಿರ್ದೇಶಕ ಡಾ. ಶಿವಕುಮಾರ ಸುರಗಾಳಿ ಅವರು, ಭಾರತ ದೇಶ ಹಳ್ಳಿಗಳ ದೇಶವಾಗಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಕಡಿಮೆ ಇರುತ್ತದೆ. ಅಲ್ಲಿನ ಜನರಿಗೆ ಆಡು ಭಾಷೆಯಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಪ್ರತಿಪಾದಿಸಿದರು.

ಇತರೆ ಮಾಧ್ಯಮಗಳಾದ ದೂರದರ್ಶನ, ಪತ್ರಿಕೆಗಳಿಗಿಂತ ಕಲಾ ತಂಡಗಳು ಹೆಚ್ಚಿನ ರೀತಿಯ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ತಂಡಗಳು ಕಲಬುರಗಿ ವಿಭಾಗ ಮಟ್ಟದಲ್ಲಿ ಹೆಚ್ಚಿನ ತರಬೇತಿ ಪಡೆದುಕೊಂಡು ಸಾರ್ವಜನಿಕರಲ್ಲಿ ಟಿ.ಬಿ., ಕ್ಷಯರೋಗ, ಲಸಿಕೆ ಮುಂತಾದ ಕಾರ್ಯಕ್ರಮಗಳ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಎಸ್. ಮಾಲಿ, ಜಾನಪದ ಕಲಾ ತಂಡಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಲವು ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಪ್ರದರ್ಶನ ಮಾಡುವದರಿಂದ ಅಲ್ಲಿಯ ಜನರಲ್ಲಿ ಸಾಕಷ್ಟು ಪರಿಣಾಮ ಬೀರಿವೆ. ಸಂತಾನಹರಣ, ಚುಚ್ಚುಮದ್ದು ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರಲ್ಲಿ ಅರಿವು ಮೂಡಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಡಿ.ಡಿ. ಮುಗಳಿ ಅವರು ಗೀತೆಯೊಂದನ್ನು ಸುಮಧುರವಾಗಿ ಹಾಡಿ ಗಮನ ಸೆಳೆದರು. ಐಇಯು ಕಲಬುರಗಿ ವಿಭಾಗದ ಡಿಹೆಚ್‌ಇಓ ಜ್ಞಾನೇಶ್ವರ ಮಾತನಾಡಿ, ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಕಲಾ ತಂಡಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಸಂಪನ್ಮೂಲ ವ್ಯಕಿ ಮತ್ತು ರಂಗಾಯಣದ ಮಾಜಿ ನಿರ್ದೇಶಕ ಮಹೇಶ ಪಾಟೀಲ್, ಆರ್‌ಸಿಹೆಚ್‌ಓ ಡಾ. ಪ್ರಭುಲಿಂಗ ಮಾನಕರ್, ಡಾ. ರವೀಂದ್ರ ನಾಗಲೀಕರ್ ಉಪಸ್ಥಿತರಿದ್ದರು. ಕೊಪ್ಪಳದ ಜನ ಜಾಗೃತಿ ತಂಡ ಪ್ರಾರ್ಥನಾ ಗೀತೆ ಮತ್ತು ನೇತ್ರ ಕಲಾ ತಂಡ ನಾಡಗೀತೆ ಪ್ರಸ್ತುತ ಪಡಿಸಿದರು.

ಬಿಹೆಚ್‌ಓ ಸೋಮಶೇಖರ ಸ್ವಾಗತಿಸಿದರು. ಶಶಿಧರ ಬಳೆ ಮತ್ತು ಮಹಾದೇವಿ ಹತ್ತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಎನ್.ಟಿ. ಸಂಗಾ ಅವರು ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here