ಕಲಬುರಗಿ: ಅಭ್ಯರ್ಥಿಯ ಚಿಹ್ನೆ ಅದಲು ಬದಲಾಗಿ ತಕರಾರು ತೆಗೆದ ಹಿನ್ನೆಲೆ ಮತದಾನ ರದ್ದುಪಡಿಸಿ ಡಿ. 24ಕ್ಕೆ ಮರು ಮತದಾನ ನಿಗದಿಪಡಿಸಿರುವ ಘಟನೆ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ ಪಂಚಾಯತಿಯ ವಾರ್ಡ್ ಸಂಖ್ಯೆ 1ರಲ್ಲಿ ಇಂದು ನಡೆದಿದೆ.
ಕಲಬುರಗಿ ಜಿಲ್ಲೆಯ 6 ತಾಲ್ಲೂಕಿನಲ್ಲಿ ಇಂದು ಮೊದಲ ಹಂತದ ಗ್ರಾಮ ಪಂಚಾಯಿತ್ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಗ್ರಾಮದ ವಾರ್ಡ್ ನಂ. 1ರ ಅಭ್ಯರ್ಥಿ ಜೈರಾಜ್ ಹಲಗೆ ಎಂಬುವರಿಗೆ ಚುನಾವಣಾ ಆಯೋಗ ತುತ್ತೂರಿ ಚಿಹ್ನೆ ನೀಡಿತ್ತು. ಆದರೆ ಮತದಾನದ ಬ್ಯಾಲೆಟ್ ಪೇಪರ್ನಲ್ಲಿ ತುತ್ತೂರಿ ಬದಲು ಕಹಳೆ ಊದುವ ಮನುಷ್ಯ ಚಿಹ್ನೆ ನಮೂದಿರುವುದರಿಂದ ಆಯೋಗ ಮರು ಮತದಾನ ಡಿ. 24ಕ್ಕೆ ನಿಗದಿ ಪಡಿಸಿದೆ ಎಂದು ಗ್ರಾಮದ ಗ್ರಾಮ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ ಮಾಹಿತಿ ನೀಡಿದ್ದಾರೆ.
ಅಭ್ಯರ್ಥಿ ಜೈರಾಜ್ ತುತ್ತೂರಿ ಚಿಹ್ನೆಯಿಂದ ಪ್ರಚಾರ ಕೈಗೊಂಡಿದ್ದು, ಮತದಾನ ವೇಳೆಯಲ್ಲಿ ಬೇರೆ ಚಿಹ್ನೆ ಕಹಳೆ ಊದುವ ಮನುಷ್ಯ ಚಿಹ್ನೆ ನೀಡಿದ್ದಾರೆ ಎಂದು ಅಕ್ಷೇಪ ವ್ಯಕ್ತಪಡಿಸಿದರು.
ಇದರಿಂದ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪರೀಶಿಲನೆ ಮಾಡಿದಾಗ ಚಿಹ್ನೆ ತಪ್ಪಾಗಿರುವುದು ಮನವರಿಕೆಯಾಗಿದ ನಂತರ, ಮತದಾನ ರದ್ದುಪಡಿಸಿ, 24ರಂದು ಮರು ಮತದಾನ ದಿನಾಂಕ ನಿಗದಿ ಮಾಡಲಾಗಿದೆ.