ಬೀದಿ ದೀಪ ನಿರ್ವಹಣೆ ಸ್ಥಗಿತ-ಕತ್ತಲಲ್ಲಿ ವಾಡಿ ಪಟ್ಟಣ

0
57

ಕಲಬುರಗಿ: ವಾಡಿ ಪಟ್ಟಣದ ಪುರಸಭೆಯ ಕಾಂಗ್ರೆಸ್ ಆಡಳಿತ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳ ನಿರ್ವಹಣೆ ಕೈಬಿಟ್ಟಿದೆ. ಪರಿಣಾಮ ರಾತ್ರಿ ನಗರದ ಬೀದಿಗಳಿಗೆ ಕಗ್ಗತ್ತಲು ಆವರಿಸಿಕೊಳ್ಳುತ್ತಿದ್ದು,  ಬಡಾವಣೆಗಳ ಜನರಿಗೆ ಬೆಳಕಿನ ಭಾಗ್ಯವೇ ಇಲ್ಲದಂತಾಗಿದೆ.

ಸುಮಾರು ೫೦ ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ನಗರದಲ್ಲಿ ಒಟ್ಟು ೨೩ ವಾರ್ಡ್‌ಗಳಿವೆ. ಕಾಂಗ್ರೆಸ್ ಪಕ್ಷ ಸದ್ಯ ಪುರಸಭೆಯ ಅಧಿಕಾರದಲ್ಲಿದೆ. ಕಸ ಸ್ವಚ್ಚತೆ, ಚರಂಡಿ-ಶೌಚಾಲಯಗಳ ಶುಚಿತ್ವ, ಬೀದಿ ದೀಪಗಳ ನಿರ್ವಹಣೆ, ನಿತ್ಯ ಕುಡಿಯುವ ನೀರು ಪೂರೈಕೆ ಪುರಸಭೆ ಆಡಳಿತ ನಿಭಾಯಿಸಬೇಕಾದ ಪ್ರಮುಖ ಕರ್ತವ್ಯಗಳಾಗಿವೆ. ಹಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟುನಿಂತಿವೆ. ಕತ್ತಲ ರಸ್ತೆಗಳಲ್ಲಿ ಸಂಚರಿಸಲು ಪಾದಚಾರಿಗಳು ಹೆದರುವಂತಾಗಿದೆ.

Contact Your\'s Advertisement; 9902492681

ವಾಹನಗಳ ಓಡಾಟ ಒಂದೆಡೆಯಾದರೆ, ಕತ್ತಲ ರಸ್ತೆಗಳಲ್ಲಿ ನಾಯಿ, ಹಂದಿಗಳ ಕಿರಿಕಿರಿ ಇನ್ನೊಂದೆಡೆ. ಲಾರಿ, ಜೀಪು, ಬೈಕ್‌ಗಳು ಬೀದಿಗಳಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದ್ದು, ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಕತ್ತಲು ಭಾಗ್ಯ ಕರುಣಿಸಿರುವ ನಿರ್ಲಕ್ಷ್ಯ ಧೋರಣೆಯ ಪುರಸಭೆ ಅಧಿಕಾರಿಗಳನ್ನು ಮತ್ತು ಚುನಾಯಿತ ಜನಪ್ರತಿನಿಧಿಗಳನ್ನು ಶಪಿಸುತ್ತಲೇ ಜನರು ಹೆಜ್ಜೆ ಹಾಕುತ್ತಿದ್ದಾರೆ.

ಕಲಬುರಗಿ ಮೂಲದ ಗುತ್ತಿಗೆದಾರನಿಗೆ ನೀಡಲಾದ ಬೀದಿ ದೀಪ ನಿರ್ವಹಣೆ ಅವದಿ ಪೂರ್ಣಗೊಂಡಿದೆ ಎನ್ನಲಾಗಿದ್ದು, ಕಳೆದ ಒಂದು ತಿಂಗಳಿಂದ ನಿರ್ವಹಣೆ ಸ್ಥಗಿತಗೊಂಡಿದೆ. ಪುರಸಭೆ ಆಡಳಿತ ಒಂದು ವರ್ಷದ ಬೀದಿದೀಪ ನಿರ್ವಹಣೆ ವೆಚ್ಚ ಪಾವತಿಸಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಗುತ್ತಿಗೆದಾರ ದೀಪಗಳ ರಿಪೇರಿ ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪ ಒಂದೆಡೆಯಾದರೆ.

ದೀಪಗಳ ನಿರ್ವಹಣೆ ಹೆಸರಿನಲ್ಲಿ ಗುತ್ತಿಗೆದಾರ ಪುಕ್ಕಟೆ ಬಿಲ್ಲ ಲಪಟಾಯಿಸುತ್ತಿದ್ದಾನೆ ಎಂಬ ದೂರು ಇನ್ನೊಂದೆಡೆ ಕೇಳಿಬರುತ್ತಿದೆ. ಬೀದಿ ದೀಪಗಳ ನಿರ್ವಹಣೆಗಾಗಿ ಪುರಸಭೆ ತಿಂಗಳಿಗೆ ಒಂದು ಲಕ್ಷ ರೂ. ಖರ್ಚು ಮಾಡುತ್ತಿದೆ. ದೀಪಗಳ ನಿರ್ವಹಣೆ ಮಾಡದೆ ಕೊಟ್ಟಿ ಬಿಲ್ಲ ಬರೆಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ಆಡಳಿತ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಗೆ ವಾಡಿ ನಗರ ಬೆಳಕು ಕಾಣದೆ ಕತ್ತಲಲ್ಲಿ ಮುಳುಗಿರುವುದು ಮಾತ್ರ ವಿಪರ್ಯಾಸ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here