ಶಹಾಬಾದ:ತಾಲೂಕಿನ ನಾಲ್ಕು ಗ್ರಾಪಂಗಳ ಚುನಾವಣೆಯ ಫಲಿತಾಂಶ ಹೊರಡಿಸಿದ ನಂತರ ಸೋಲಿನ ಕಹಿ ಹಾಗೂ ಗೆಲುವಿನ ಸಹಿ ನಡುವೆ ಕೆಲವೊಂದು ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.
ಯಾವುದೇ ರಾಜಕೀಯ ಅನುಭವ ಇಲ್ಲದ ಹಾಗೂ ಪ್ರಥಮ ಬಾರಿ ಜನರ ಒತ್ತಾಸೆಗೆ ತೊನಸನಹಳ್ಳಿ(ಎಸ್) ಗ್ರಾಪಂಯ ಚುನಾವಣೆಗೆ ವಾರ್ಡ ನಂ. 3ರಿಂದ ಸ್ಪರ್ಧಿಸಿದ ಗೋಳಾ(ಕೆ) ಗ್ರಾಮದ ದನ ಕಾಯುವ ಹಾಗೂ ಕೂಲಿ ಕೆಲಸ ಮಾಡುವ ಮರೆಪ್ಪ ರಾಯಪ್ಪ ಯುವನೊಬ್ಬ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.ಅಲ್ಲದೇ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್ ತೊನಸನಹಳ್ಳಿ(ಎಸ್) ಗ್ರಾಪಂಯ ಚುನಾವಣೆಗೆ ವಾರ್ಡ ನಂ. 3ರಿಂದ ಸ್ಪರ್ಧಿಸಿ, ಸೋಲಿನ ಕಹಿ ಅನುಭವಿಸಿದ್ದಾರೆ.
ಶಹಾಬಾದ ತಾಲೂಕಿನ ತಾಪಂ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಚವ್ಹಾಣ ಅವರ ಪತಿ ಸುರೇಶ ಚವ್ಹಾಣ ಭಂಕೂರ ಗ್ರಾಪಂಯ ವಾರ್ಡ ನಂ.5 ರಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದಾರೆ. ಭಂಕೂರ ವಾರ್ಡ ನಂ.4 ರಿಂದ ಅಭ್ಯರ್ಥಿ ಲಕ್ಷ್ಮಿಕಾಂತ ಕಂದಗೂಳ ಕೆಲಸ ಮಾಡಿದ್ದರೇ ಮಾತ್ರ ಮತ ಹಾಕಿ.ಇಲ್ಲದಿದ್ದರೇ ಬೇಡ ಎಂದು ಹೇಳಿದ ಅಭ್ಯರ್ಥಿ ಹಣವಿಲ್ಲದೇ ಗೆಲುವುದಕ್ಕೆ ಆಗೋದಿಲ್ಲ ಎಂಬ ಕಾಲದಲ್ಲಿ ಪ್ರಚಾರ ಮಾಡಿ ಸತತವಾಗಿ ಮೂರು ಬಾರಿ ಗೆಲುವು ಕಂಡಿದ್ದಾರೆ.ಅಲ್ಲದೇ ಈ ಹಿಂದೆ ಪತ್ನಿಯನ್ನು ಗ್ರಾಪಂ ಉಪಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಭಂಕೂರ ವಾರ್ಡ ನಂ.4ರ ಅಂಗವಿಕಲ ಅಭ್ಯರ್ಥಿ ಈರಣ್ಣ ಕಾರ್ಗಿಲ್ ಈ ಹಿಂದೆ ಸೋಲು ಕಂಡು, ಈ ಬಾರಿ ಗೆಲುವು ಕಂಡಿದ್ದಾರೆ.ಅಲ್ಲದೇ ಭಂಕೂರ ವಾರ್ಡ ನಂ.1 ರಿಂದ ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಶರಣಗೌಡ ಬಸವಂತರಾಯ ಸುಮಾರು 160 ಮತಗಳ ಅಂತರದಿಂದ ಗೆಲುವು ಕಂಡು, ಗ್ರಾಪಂಯಲ್ಲಿ ಸತತವಾಗಿ ಮೂರನೇ ಬಾರಿ ಗೆಲುವು ಕಂಡಿದ್ದಾರೆ. ಭಂಕೂರ ಗ್ರಾಪಂ ವಾರ್ಡ ನಂ.5ರ ಅಭ್ಯರ್ಥಿ ಹಾಗೂ ಬಿಜೆಪಿ ಮುಖಂಡ ಪತ್ನಿ ಈರಮ್ಮ ಭರತ ಕೇವಲ ಮೂರು ಮತಗಳನ್ನು ಪಡೆದು, ತಾಲೂಕಿನಲ್ಲಿಯೇ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಮರತೂರ ಗ್ರಾಪಂಯ ವಾರ್ಡ ನಂ.2 ರ ಅಭ್ಯರ್ಥಿ ಅಜೀತಕುಮಾರ ಪಾಟೀಲ ತಮ್ಮ ಸಹೋದರನ ವಿರುದ್ಧ ಜಿದ್ದಾ ಜಿದ್ದಿನ ಪೈಪೋಟಿಯಲ್ಲಿ ಅತಿ ಹೆಚ್ಚು ಮತ ಪಡೆಯುವ ಮೂಲ ಸತತವಾಗಿ 6ನೇ ಬಾರಿ ಗ್ರಾಪಂ ಪ್ರವೇಶ ಮಾಡಿದ್ದಾರೆ.ಅಲ್ಲದೇ ಇವರ ಇಡೀ ಪೆನಲ್ ಜಯಗಳಸಿರುವುದು ಮತ್ತೊಂದು ವಿಶೇಷ. ಭಂಕೂರ ಗ್ರಾಪಂ ವಾರ್ಡ ನಂ.5ರ ಅಭ್ಯರ್ಥಿ ಶರಣಬಸಪ್ಪ ಧನ್ನಾ ಅವರು ಗೆಲುವು ಸಾಧಿಸುವ ಮೂಲಕ ಸತತವಾಗಿ 6ನೇ ಬಾರಿ ಗ್ರಾಪಂ ಸದಸ್ಯರಾಗಿ ಹೊರಹೊಮ್ಮಿದ್ದಾರೆ.ಹೊನಗುಂಟಾ ಗ್ರಾಪಂಯ ವಾರ್ಡ ನಂ.2 ರಲ್ಲಿ ಪ್ರಭಾವಿ ಮುಖಂಡರ ಪೆನಲ್ ಅಭ್ಯರ್ಥಿಗಳೆಲ್ಲರೂ, ಸೋಲನ್ನು ಅನುಭವಿಸಿರುವುದಕ್ಕೆ ಆಶ್ಚರ್ಯಚಕಿತರಾಗಿದ್ದಾರೆ.ಅಲ್ಲದೇ ವಾರ್ಡ ನಂ.1 ಅಭ್ಯರ್ಥಿ ಮತ್ತು ಬಿಜೆಪಿ ಮುಖಂಡ ಸಂಗಣ್ಣ ಇಜೇರಿ ಅಲ್ಪಸಂಖ್ಯಾತರ ಪ್ರದೇಶದಲ್ಲಿ ಗೆಲುವು ಸಾಧಿಸಿ ಎಲ್ಲರ ಗಮನ ಸೆಳೆದಿದ್ದಾರೆ. ತೊನಸನಹಳ್ಳಿ(ಎಸ್) ಗ್ರಾಪಂಯ ವಾರ್ಡ ನಂ.6ರ ಅವಿನಾಶ ಕೊಂಡಯ್ಯ ಮತ್ತು ಅವರ ಸಹೋದರಿ ವಾರ್ಡ ನಂ.7 ರ ಅಭ್ಯರ್ಥಿ ನಿರ್ಮಲಾ ಒಂದೇ ಮನೆಯ ಅಕ್ಕ-ತಮ್ಮ ಗೆಲುವು ಕಂಡಿದ್ದಾರೆ.
ತೊನಸನಹಳ್ಳಿ(ಎಸ್) ಗ್ರಾಪಂಯ ಒಂದೇ ಕುಟುಂಬದ ವಾರ್ಡ ನಂ.1 ಅಭ್ಯರ್ಥಿ ಮಲ್ಲಣ್ಣ ಮರತೂರ ಮತ್ತು ಅವರ ಅತ್ತಿಗೆ ವಾರ್ಡ.ನಂ 2ರ ಅಭ್ಯರ್ಥಿ ಮುತ್ತಮ್ಮ.ಎಸ್.ಮರತೂರ ಗೆಲುವು ಸಾಧಿಸಿದ್ದಾರೆ.