ಕಲಬುರ್ಗಿ, – ತಪ್ಪು ತಿದ್ದಿಕೊಂಡು ಮನಪರಿವರ್ತನೆ ಮಾಡಿಕೊಂಡವರಿಗೆ ದೇವರು ಖಂಡಿತ ಒಳ್ಳೆಯದನ್ನು ಮಾಡುತ್ತಾನೆ ಎಂದು ರೆವಡೆಂಡ್ ಬಿಷಪ್ ರಾಬರ್ಟ್ ಮೈಕೆಲ್ ಮಿರಾಂಡಾ ಅವರು ಇಲ್ಲಿ ಕೈದಿಗಳಿಗೆ ಹಿತೋಪದೇಶ ಮಾಡಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಂಡ ಸಂಭ್ರಮದ ಕ್ರಿಸ್‌ಮಸ್ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತನಿಗೆ ಪೂಜಿಸಬೇಕು. ಆರಾಧಿಸಬೇಕು. ಅಂದಾಗ ಜೀವನದಲ್ಲಿರುವ ಎಲ್ಲ ಕಷ್ಟ, ನಷ್ಟ, ನೋವುಗಳು ಮಾಯವಾಗಿ ನೆಮ್ಮದಿ, ಶಾಂತಿ ಲಭಿಸುತ್ತದೆ ಎಂದರು.
ಏನಾದರೂ ಆಗು ಮೊದಲು ನೀವು ಮಾನವರಾಗು ಎಂದು ಕುವೆಂಪು ಅವರ ದಿವ್ಯ ಸಂದೇಶವನ್ನು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಅವರು ಉಲ್ಲೇಖಿಸಿದ್ದನ್ನು ಪ್ರಸ್ತಾಪಿಸಿದ ಅವರು, ಮೊದಲು ಮಾನವೀಯತೆ ಎಲ್ಲರಲ್ಲಿ ಬರಬೇಕು ಎಂದರು.
ನಾನು ಕಾರಾಗೃಹದಲ್ಲಿ ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವ ಮುನ್ನ ಅವರ ಕಚೇರಿಗೆ ಹೋದೆ. ಪಿ.ಎಸ್. ರಮೇಶ್ ಅವರು ಅಲ್ಲಿ ಹೂವಿನಿಂದ ಅಲಂಕರಿಸಿದ ಜ್ಯೋತಿಯನ್ನು ಹೊತ್ತಿಸಿದ ದೇವರ ಭಾವಚಿತ್ರದ ಮುಂದೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಆ ಕುರಿತು ನಾನು ಕೇಳಿಗಾಗ ಕೈದಿಗಳಿಗೆ ಒಳ್ಳೆಯದಾಗಲಿ. ಕಾರಾಗೃಹದ ಜಮೀನಿನಲ್ಲಿರುವ ಬೆಳೆ ಸಮೃದ್ಧಿಯಾಗಲಿ ಎಂಬ ಕೋರಿಕೆಯನ್ನು ಪ್ರಾರ್ಥನೆಯ ಮೂಲಕ ಮಾಡಿಕೊಂಡಿದ್ದಾಗಿ ಹೇಳಿದರು. ಈ ರೀತಿ ದೇವರಿಗೆ ನೆನೆಯುವುದರಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ ಎಂದು ಅವರು ಹೇಳಿದರು.
ಎಲ್ಲ ಸಮುದಾಯದವರಿಗೂ ಒಬ್ಬೊಬ್ಬರು ದೇವರು ಇದ್ದೇ ಇರುತ್ತಾರೆ. ತಮ್ಮ, ತಮ್ಮ ದೇವರನ್ನು ನೆನೆಯಬೇಕು. ದಿನನಿತ್ಯ ಯೋಗ, ಧ್ಯಾನ, ಪೂಜೆ, ಪ್ರಾರ್ಥನೆಯಲ್ಲಿ ತೊಡಗಬೇಕು ಎಂದು ಹೇಳಿದ ಅವರು, ಕಾರಾಗೃಹದಲ್ಲಿ ಕೈದಿಗಳಿಗೆ ನೋವು ಉಂಟಾದಾಗ, ಬೇಸರವಾದಾಗ ಅದನ್ನು ಹೋಗಲಾಡಿಸಲು ಒಂದು ಚಿಕ್ಕದಾದ ಪ್ರಾರ್ಥನಾ ಮಂದಿರವನ್ನು ಸ್ಥಾಪಿಸುವಂತೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಲ್ಲಿ ಕೋರಿದರು.
ತಪ್ಪು ಯಾವುದೇ ಘಳಿಗೆಯಲ್ಲಿ ನಡೆಯುತ್ತದೆ. ಅದು ಪುನರಾವರ್ತಿತವಾಗಬಾರದು ಎಂದು ಹೇಳಿದ ಅವರು, ಒಬ್ಬ ರಾಜಕುಮಾರನು ತನ್ನ ಪುತ್ರಿ ರಾಜಕುಮಾರಿಗೆ ವಿವಾಹ ಮಾಡಬೇಕಿತ್ತು. ಆಕೆಗೆ ಇಷ್ಟವಾಗುವ ವ್ಯಕ್ತಿಯನ್ನೇ ಮದುವೆ ಮಾಡಲು ನಿರ್ಧರಿಸಿದ್ದ. ಹೀಗಾಗಿ ಆಕೆ ತನಗೆ ಇಷ್ಟವಾಗುವ ವರನಿಗೆ ನೋಡುತ್ತಿದ್ದಳು. ಒಬ್ಬ ಬಿಡುಗಡೆಯಾದ ಕೈದಿಯು ರಾಜಕುಮಾರಿಯನ್ನು ವಿವಾಹವಾಗುವ ಉದ್ದೇಶದಿಂದ ಎಲ್ಲ ರೀತಿಯಿಂದಲೂ ಮೇಕಪ್ ಮಾಡಿಕೊಂಡು ಆಕೆಯ ಹತ್ತಿರ ಹೋದ. ಆತನ ರೂಪವನ್ನು ನೋಡಿದ ರಾಜಕುಮಾರಿ ಆತನಿಗೆ ಮದುವೆಯಾಗುವುದಾಗಿ ಹೇಳಿದಳು. ಅದರಂತೆ ರಾಜಕುಮಾರನು ಸಹ ತನ್ನ ಪುತ್ರಿಯ ಮಾತಿಗೆ ಒಪ್ಪಿ ಮದುವೆ ಮಾಡಿದ. ಇದರಿಂದಾಗಿ ಬಿಡುಗಡೆಯಾದ ಕೈದಿಯು ತಾನು ಮೇಕಪ್ ಮಾಡಿಕೊಂಡಿರುವ ಕುರಿತು ಹಾಗೂ ತಾನು ಹಿಂದೆ ತಪ್ಪು ಮಾಡಿದ್ದರ ಕುರಿತು ರಾಜಕುಮಾರಿಗೆ ಹೇಳದೇ ವಿವಾಹ ಮಾಡಿಕೊಂಡಿರುವ ಕುರಿತು ಪ್ರಾಯಶ್ಚಿತ ಮಾಡಿಕೊಂಡ. ಇದ್ದ ವಿಷಯವನ್ನೆಲ್ಲ ರಾಜಕುಮಾರಿಗೆ ಹೇಳಿದ. ಆಗ ರಾಜಕುಮಾರಿ ನಿನ್ನ ಮೇಕಪ್ ತೆಗೆದುಬಿಡು. ಮೊದಲು ಯಾವ ರೂಪದಲ್ಲಿದ್ದೆಯೋ ಅದೇ ರೀತಿ ಇರು ಎಂದು ಹೇಳಿದಳು. ವಿಷಯ ರಾಜಕುಮಾರನಿಗೂ ಗೊತ್ತಾಯಿತು. ಆದಾಗ್ಯೂ, ಕೈದಿ ಮನಪರಿವರ್ತನೆಯಿಂದ ಬದಲಾಗಿದ್ದು ಕಂಡು ರಾಜಕುಮಾರ ಹಾಗೂ ರಾಜಕುಮಾರಿ ಇಬ್ಬರೂ ಸಂತೋಷಪಟ್ಟರು. ಅದೇ ರೀತಿ ಮಾಡಿದ ತಪ್ಪು ತಿದ್ದಿಕೊಂಡು ಒಳ್ಳೆಯವರಾಗಿ ಬದುಕಿದರೆ ಇಡೀ ಸಮಾಜವೂ ಸಹ ನಿಮಗೆ ಗೌರವ ಕೊಡುತ್ತದೆ ಎಂದು ಕಥೆಯನ್ನು ಹೇಳುವ ಮೂಲಕ ಕೈದಿಗಳ ಗಮನಸೆಳೆದರು.
ವೇದಿಕೆಯ ಮೇಲೆ ಫಾದರ್ ಸ್ಟ್ಯಾನಿ ಲೋಬೋ, ಫಾದರ್ ವಿಕ್ಟರ್ ವ್ಯಾಸ್, ಸೇಂಟ್ ಮೇರಿ ಸುಖುಲ್ ಕೋಟನೂರದ ಪ್ರಿನ್ಸಿಪಾಲ್ ಸಿಸ್ಟರ್ ಫಿಲೋಮಿನಾ, ಸಿಸ್ಟರ್ ಗ್ರೇಸಿ, ಫಾದರ್ ವಿನಸೆಂಟ್ ಪೆರಿಯಾರ್, ಸಿಸ್ಟರ್ ಅಲ್ಫೋನ್ಸಾ, ಫಾದರ್ ಡೇವಿಡ್, ಸಿಸ್ಟರ್ ರೀನಾ ಡಿ.ಸೋಜಾ, ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್, ಅಧೀಕ್ಷಕ ವಿ.ಕೃಷ್ಣಮೂರ್ತಿ, ಸಿಬ್ಬಂದಿಗಳಾದ ಶೈನಾಜ್, ಗೋಪಾಲಕೃಷ್ಣ ಕುಲಕರ್ಣಿ, ಅರ್ಜುನ್ ಸಿಂಗ್ ಚವ್ಹಾಣ್, ಅಶೋಕ್ ವಾಶನಿ, ಡಾ. ಅಣ್ಣಾರಾವ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.