ಬಿಡುಗಡೆಯಾದ ಕೈದಿಗಳ ಸ್ವಾವಲಂಬಿಯಾಗಿ ಬದುಕುಲು ಸಂಘ, ಸಂಸ್ಥೆಗಳ ಸಹಭಾಗಿತ್ವ ಅಗತ್ಯ: ಅಧೀಕ್ಷಕ ರಮೇಶ್

0
59

ಕಲಬುರಗಿ:  ಜೈಲಿನಿಂದ ಬಿಡುಗಡೆಯಾಗುವ ಕೈದಿಗಳು ಸ್ವಾವಲಂಬಿಯಾಗಿ ಉತ್ತಮ ಜೀವನ ನಡೆಸಲು ಸಂಘ, ಸಂಸ್ಥೆಗಳ ಹಭಾಗಿತ್ವ ಅತ್ಯಂತ ಅಗತ್ಯವಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ್ ಅವರು ಇಲ್ಲಿ ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಹಮ್ಮಿಕೊಂಡ ಸಂಭ್ರಮದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲವನ್ನೂ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಲಾಗದು. ಸಾರ್ವಜನಿಕರ ಸಹಭಾಗಿತ್ವವು ಅತ್ಯಂತ ಅಗತ್ಯವಾಗಿದೆ ಎಂದರು.

Contact Your\'s Advertisement; 9902492681

ಜೈಲಿನಲ್ಲಿ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು. ಇದರಿಂದ ಇಡೀ ಪರಿಸರ ಸ್ವಚ್ಚವಾಗಲು ಕಾರಣವಾಯಿತು ಎಂದು ಹೇಳಿದ ಅವರು, ಬೆಂಗಳೂರಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದಾಗ ಅನೇಕ ಸಾರ್ವಜನಿಕ ಸಂಘ, ಸಂಸ್ಥೆಗಳು ಕಾರಾಗೃಹದಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೈದಿಗಳ ಮನ ಪರಿವರ್ತನೆ ಹಾಗೂ ಅವರಲ್ಲಿ ಸ್ವಾವಲಂಬನೆ ಮತ್ತು ವ್ಯಕ್ತಿತ್ವ ವಿಕಸನಗೊಳಿಸುವಂತಹ ಕಾರ್ಯದಲ್ಲಿ ತೊಡಗಿದ್ದರು. ಸಿಸ್ಟರ್ ಅಲ್ಡಾ ಅವರು ೨೫ ವರ್ಷಗಳ ಸುದೀರ್ಘ ಅವಧಿಯವರೆಗೆ ಕೈದಿಗಳ ಮನಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಹೇಳಿದರು.

ಇಲ್ಲಿನ ಕಾರಾಗೃಹಕ್ಕೆ ಸ್ವಯಂ ಸೇವಾ ಸಂಘ, ಸಂಸ್ಥೆಗಳು ಸಹ ಮುಂದೆ ಬರಬೇಕು. ಕೈದಿಗಳಿಗೆ ಮನಪರಿವರ್ತನೆ ಮಾಡಲು ಹಾಗೂ ಅವರಲ್ಲಿರುವ ಕೌಶಲ್ಯವನ್ನು ಪ್ರೋತ್ಸಾಹಿಸಿ ಸೂಕ್ತ ತರಬೇತಿ ಕೊಡುವಂತಹ ಕೆಲಸ ಆಗಬೇಕು. ಜೈಲಿನಿಂದ ಬಿಡುಗಡೆಯಾದ ಕೈದಿಗಳು ಮನೆಗೆ ಹೋದ ಮೇಲೆ ಅವರಿಗೆ ಹೊರೆಯಾಗಬಾರದು. ಮನೆಯವರೇ ಅವರಿಗೆ ದುಡಿದು ಹಾಕುವ ಪರಿಸ್ಥಿತಿ ಬರಬಾರದು. ತಮ್ಮ ಜೀವನವನ್ನು ತಾವೇ ನಿರ್ವಹಿಸಿಕೊಂಡು ಹೋಗುವಂತಹ ಕೆಲಸವನ್ನು ಕಲಿಸುವಂತಹ ಕೆಲಸ ಜೈಲಿನಲ್ಲಿಯೇ ಆಗಬೇಕು. ಆ ರೀತಿ ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಂತಹ ಸಂಘ, ಸಂಸ್ಥೆಗಳಿಗೆ ಮುಕ್ತ ಅವಕಾಶವಿದೆ ಎಂದು ಅವರು ತಿಳಿಸಿದರು.

ಕುವೆಂಪು ಅವರು ಹೇಳಿದ ಏನಾದರೂ ಆಗು ನೀನು ಮೊದಲು ಮಾನವನಾಗು ಎಂದು ಹೇಳಿದ ಅವರು, ದೇವರೊಬ್ಬ ನಾಮಹಲವು. ಎಲ್ಲ ಸಮುದಾಯದವರಿಗೂ ಒಬ್ಬೊಬ್ಬರು ದೇವರು ಇದ್ದೇ ಇರುತ್ತಾರೆ. ಎಲ್ಲರ ಆಶಯಗಳು ಒಂದೆ. ಜೀವನದಲ್ಲಿ ಶಾಂತಿ, ನೆಮ್ಮದಿ ಇರಬೇಕು ಎಂಬುದು. ಆ ಹಿನ್ನೆಲೆಯಲ್ಲಿ ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ದೇವರಿಗೆ ಪೂಜಿಸಿ ಎಂದು ಅವರು ಹೇಳಿದರು.

ಹಲವಾರು ಹಿರಿಯ ಕೈದಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೈದಿಗಳಲ್ಲಿನ ಬೇಸರ ನಿವಾರಿಸಲು ಕೇರಂ ಬೋರ್ಡ್‌ಗಳನ್ನು ಸಹ ಕೊಡಲಾಯಿತು. ಅಸ್ವಸ್ಥ ಕೈದಿಗಳಿಗೆ ಹೊದಿಕೆಗಳನ್ನು ಸಹ ನೀಡಲಾಯಿತು. ಕೇಕ್ ಕತ್ತರಿಸುವ ಮೂಲಕ ಸಮಾರಂಭ ಉದ್ಘಾಟಿಸಲಾಯಿತು. ಏಸುವಿನ ಗೀತೆಗಳನ್ನು ಹಲವಾರು ಸಂದರ್ಭದಲ್ಲಿ ಹಾಡುವ ಮೂಲಕ ಏಸು ತತ್ವಗಳ ಪಾಲನೆಗೆ ಕರೆ ನೀಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here