ವಾಡಿ: ಮೂರು ಕರಾಳ ಕೃಷಿ ಕಾಯ್ದೆಗಳ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಯ ವಾಪಸಾತಿಗಾಗಿ ದೇಶದ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಸಂಪೂರ್ಣ ನಿರಾಶಾದಾಯಕವಾಗಿದೆ ಮತ್ತು ರೈತರ ಹೋರಾಟಕ್ಕೆ ಇದು ಮಾರಕವಾಗಿದೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಪ್ರತಿಕ್ರೀಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರೈತರ ಧೀರೋದ್ಧಾತ ಹೋರಾಟವನ್ನು ದೇಶದ ಜನತೆ ಬೆಂಬಲಿಸುತ್ತಿದ್ದಾರೆ. ಕಾಪೋರೇಟ್ ಕುಳಗಳ ಸೇವೆಗೆ ನಿಂತಿರುವ ಕೇಂದ್ರ ಸರಕಾರ ರೈತರ ಹೋರಾಟವನ್ನು ಮುರಿಯಲು ಎಲ್ಲಾ ರೀತಿಯ ತಂತ್ರಗಳನ್ನು ಹೆಣೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಹೋರಾಟಕ್ಕೆ ಅಡ್ಡಿಯಾದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಛಲಬಿಡದೆ ಚಳುವಳಿ ಮುನ್ನೆಡೆಸುತ್ತಿರುವುದನ್ನು ಸ್ವಾಗತಿಸುತ್ತೇವೆ. ಕಾಪೋರೇಟ್ ಸೇವೆಗೈಯುವ ಕೃಷಿ ನೀತಿ ಕಾಯ್ದೆಗಳ ವಿರುದ್ಧದ ಹೋರಾಟವನ್ನು ಮುಂದುವರೆಸಲು ಕೈಗೊಂಡ ರೈತರ ಐತಿಹಾಸಿಕ ತೀರ್ಮಾನವನ್ನು ಎಸ್‌ಯುಸಿಐ (ಸಿ) ಪಕ್ಷ ಸ್ವಾಗತಿಸಿ ಬೆಂಬಲಿಸುತ್ತದೆ. ದೇಶದ ಜನರು ರೈತರ ಹೋರಾಟವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದ್ದಾರೆ.