ಕಲಬುರಗಿ: ಸುಪ್ರಿಂ ಕೋರ್ಟು ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ತಡೆಹಿಡಿದು ಸಮಿತಿ ರಚನೆಗೆ ಮುಂದಾಗಿರುವುದು ನಮಗೆ ಒಪ್ಪಿಗೆಯಿಲ್ಲ. ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವವರೆಗೂ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಮುಂದುವರೆಯಲಿದೆ ಎಂದು ರೈತ ಕೃಷಿ ಕಾರ್ಮಿಕರ ಸಂಘಟನೆಯ ತಿಳಿಸಿದೆ.
ಈ ಕುರಿತು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಡಾ. ಟಿ. ಎಸ್. ಸುನೀತ್ ಕುಮಾರ್ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಹೆಚ್.ವ್ಹಿ. ದಿವಾಕರ್ ರವರು ಸುಪ್ರಿಂ ಕೋರ್ಟ್ ತೀರ್ಪಿನ ಬಳಿಕ ಈ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ದೆಹಲಿ ಹೊರವಲಯದ ಗಡಿಗಳಲ್ಲಿ ಒಂದುವರೆ ತಿಂಗಳುಗಳಿಂದ ನಡೆಯುತ್ತಿರುವ ಹೋರಾಟದ ಮೂಲಕ ಮೂರು ಮಾರಕ ಕೃಷಿ ಕಾಯ್ದೆಗಳ ವಾಪಸಾತಿಗೆ ಒತ್ತಾಯಿಸಲಾಗುತ್ತಿದೆ. ಮೂರು ಕಾಯ್ದೆಗಳ ತಾತ್ಕಾಲಿಕ ತಡೆ ರೈತರ ಹೋರಾಟವನ್ನು ಮುರಿಯುವ ತಂತ್ರವಾಗಿದೆ. ಕಾಯ್ದೆಯ ವಾಪಸಾತಿಯ ಹೊರತು ಹೋರಾಟದಿಂದ ವಾಪಸ್ಸಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಆರ್.ಕೆ.ಎಸ್. ಸಕ್ರೀಯವಾಗಿ ಭಾಗವಹಿಸುತ್ತಿದ್ದು ಕೇಂದ್ರ ಸರ್ಕಾರ ಹಾಗೂ ಅವರ ಕಾರ್ಪೋರೇಟ್ ಗೆಳೆಯರ ತಂತ್ರಗಳನ್ನು ಸೋಲಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ನಾವು ಹೋರಾಡುತ್ತೇವೆ.! ನಾವು ಗೆಲ್ಲುತ್ತೇವೆ..! ಎಂದು ಜಿಲ್ಲಾ ಅಧ್ಯಕ್ಷರಾದ ಗಣಪತರಾವ ಕೆ. ಮಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.