ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಹಿನ್ನೆಲೆ: ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳಿಗೆ ಸೂಚನೆ

0
100

ಕಲಬುರಗಿ: ಗ್ರಾಮೀಣ ಮಟ್ಟದಲ್ಲಿ ತಳ ಹಂತದ ಸಮಸ್ಯೆಗಳನ್ನು ನೇರವಾಗಿ ಜನರಿಂದಲೆ ಪಡೆದು ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದೇ ಜೂನ್ 22 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಲಬುರಗಿ ತಾಲೂಕಿನ ಹೇರೂರ(ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಗಳ ಮಹತ್ತರ ಕಾರ್ಯಕ್ರಮ ಇದಾಗಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಕ್ರಮ ಯಶಸ್ಸಿಗೆ ಸಾಂಘಿಕವಾಗಿ ಮತ್ತು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ಯ ಅಪರ ಕಾರ್ಯದರ್ಶಿ ಬಿ.ಎನ್.ಕೃಷ್ಣಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ಕಲಬುರಗಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡುತ್ತ, ಮುಖ್ಯಮಂತ್ರಿಗಳು ಜೂನ್ 22 ರಂದು ಯಾದಗಿರಿ ಜಿಲ್ಲೆಯ ಚಂಡರಕಿಯಿಂದ ಬೆಳಿಗ್ಗೆ 10 ಗಂಟೆಗೆ ನೇರವಾಗಿ ಹೇರೂರ(ಬಿ)ಗ್ರಾಮಕ್ಕೆ ಆಗಮಿಸಲಿದ್ದಾರೆ. ಆರಂಭದಲ್ಲಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರಕ್ಕೆ ಮುಂದಾಗುವರು. ನಂತರ ಸಂವಾದ ಕಾರ್ಯಕ್ರಮ ಮತ್ತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳೊಂದಿಗೆ ಚರ್ಚೆ ಸಹ ಮಾಡುವರು. ಸಾಯಂಕಾಲ 6 ಗಂಟೆಗೆ ಸ್ಥಳೀಯ ಕಲಾವಿದರು ಮತ್ತು ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳು ರಾತ್ರಿ ಗ್ರಾಮದ ಶಾಲೆಯಲ್ಲಿಯೆ ವಾಸ್ತವ್ಯ ಮಾಡಲಿದ್ದಾರೆ ಎಂದರು.

Contact Your\'s Advertisement; 9902492681

ರಾಷ್ಟ್ರದಲ್ಲಿಯೆ ಮಾದರಿಯಾದ ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನದಿಂದ ಮುಖ್ಯಮಂತ್ರಿಗಳು ತುಂಬಾ ಜನಪ್ರೀಯತೆ ಪಡೆದಿದ್ದಾರೆ. ಹಿಂದೆ 2006-07ರಲ್ಲಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಣ್ಣೂರ ಸೇರಿದಂತೆ 38 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸಹಜವಾಗಿಯೆ ಸಾರ್ವಜನಿಕರಿಂದ ಅಂದು ಸಮಸ್ಯೆಗಳ ಮಹಾಪೂರವೆ ಹರಿದು ಬರುವ ನಿರೀಕ್ಷೆಯಿದೆ. ಹೀಗಾಗಿ ಜಿಲ್ಲೆಗೆ ಸಂಬಂಧಿಸಿದಂತೆ ಇಲಾಖಾವಾರು ಪ್ರಮುಖ ಯೋಜನೆ, ಸಮಸ್ಯೆಗಳ ಪಟ್ಟಿಯನ್ನು ಕೂಡಲೆ ಜಿಲ್ಲಾಡಳಿತಕ್ಕೆ ಸಲ್ಲಿಸುವುದಲ್ಲದೆ ಎಲ್ಲದರ ಬಗ್ಗೆಯೂ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳು ಹೊಂದಬೇಕು. ಕಲ್ಯಾಣ ಕಾರ್ಯಕ್ರಮಗಳು, ಸಾಲ ಮನ್ನಾ, ಉದ್ಯೋಗ, ರಸ್ತೆ, ಕುಡಿಯುವ ನೀರು, ಸಾಮಾಜಿಕ ಪಿಂಚಣಿ ವಿಷಯಗಳ ಕುರಿತಂತೆ ಪರಿಹಾರ ಕೋರಿ ಅರ್ಜಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇರುವುದರಿಂದ ಅದಕ್ಕೆಲ್ಲ ಪರಿಹಾರ ಕಲ್ಪಿಸಲು ಅಧಿಕಾರಿಗಳು ಸರ್ವ ಸನ್ನಧರಾಗಿರಬೇಕು ಎಂದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಾತನಾಡಿ ಹೇರೂರ(ಬಿ) ಗ್ರಾಮದಲ್ಲಿ ನಡೆಯುವ ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 10 ಸಾವಿರ ಜನರು ಬರುವ ನಿರೀಕ್ಷೆ ಇದೆ. ಸಾರ್ವಜನಿಕ ಅಹವಾಲ ಸ್ವೀಕಾರಕ್ಕೆ ಇಲಾಖಾವಾರು ಪ್ರತ್ಯೇಕ ಸ್ಟಾಲ್ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳದಲ್ಲಿಯೆ ಅರ್ಜಿದಾರರಿಗೆ ಮುಖ್ಯಮಂತ್ರಿಗಳ ಸಚಿವಾಲಯದ ಸಿಬ್ಬಂದಿಯಿಂದ ಆನ್‍ಲೈನ್ ಸ್ವೀಕೃತಿ ಸಂಖ್ಯೆ ಸಹ ನೀಡಲಾಗುತ್ತದೆ. ಜಿಲ್ಲೆಯ ವಿವಿಧ ತಾಲೂಕು, ಹೋಬಳಿಗಳಿಂದ ಜನರು ಹೇರೂರು(ಬಿ) ಗ್ರಾಮಕ್ಕೆ ಬರಲು ಅನುಕೂಲವಾಗುವಂತೆ ವಿಶೇಷ ಬಸ್ಸುಗಳ ಕಾರ್ಯಾಚರಣೆ ಮಾಡಬೇಕು ಎಂದು ಎನ್.ಇ.ಕೆ.ಆರ್.ಟಿ.ಸಿ. ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ನೆನಗುದ್ದಿಗೆ ಬಿದ್ದಿರುವ ಪ್ರಮುಖ ಯೋಜನೆಗಳು ಮತ್ತು ಬಹಳ ವರ್ಷಗಳಿಂದ ಜನರ ಬೇಡಿಕೆ ಇದ್ದರು ಇದೂವರೆಗೆ ಸಾಕಾರಗೊಳ್ಳದ ಯೋಜನೆಗಳ ಬಗ್ಗೆಯೂ ಆಯಾ ಇಲಾಖೆಯ ಅಧಿಕಾರಿಗಳು ಕೂಡಲೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಒಮ್ಮೆ ಹೇರೂರ(ಬಿ) ಗ್ರಾಮಕ್ಕೆ ಬೇಟಿ ನೀಡಿ ಇಲಾಖೆಗೆ ಸಂಬಂಧಿಸಿದ ಯೋಜನೆಗಳ, ಸಮಸ್ಯೆಗಳ ಮಾಹಿತಿಯನ್ನು ಕಲೆಹಾಕಿಕೊಂಡಿರಬೇಕು. ಸಿ.ಎಂ. ಪ್ರವಾಸ ದಿನದಂದು ಜಿಲ್ಲಾ ಹಂತದ ಎಲ್ಲಾ ಇಲಾಖೆಯ ಅಧಿಕಾರಿಗಳು, ಬ್ಯಾಂಕ್ ನಿಯಂತ್ರಣಾಧಿಕಾರಿಗಳು ಕಡ್ಡಾಯವಾಗಿ ಗ್ರಾಮದಲ್ಲಿ ಹಾಜರಿರಬೇಕು ಎಂದರು.

ರಜೆ ಇಲ್ಲ:- ಮುಖ್ಯಮಂತ್ರಿಗಳ ಪ್ರವಾಸ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರಗಳ ಕಾಲ ಯಾವುದೇ ಅಧಿಕಾರಿ-ಸಿಬ್ಬಂದಿಗಳು ರಜೆ ಮೇಲೆ ತೆರಳುವಂತಿಲ್ಲ ಎಂದ ಜಿಲ್ಲಾಧಿಕಾರಿಗಳು ಈಗಾಗಲೆ ರಜೆ ಮೇಲೆ ತೆರಳಿದ್ದಲ್ಲಿ ಕೂಡಲೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿದರು.

ಜನತಾ ದರ್ಶನದ ಅರ್ಜಿಗಳು ಪ್ರಥಮಾದ್ಯತೆ ಮೇಲೆ ವಿಲೇವಾರಿ:- ಜನತಾ ದರ್ಶನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮುಖ್ಯಮಂತ್ರಿಗಳ ಸಚಿವಾಲಯದಿಂದ ಸಂಬಂಧಿಸಿದ ಇಲಾಖೆಗಳಿಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ. ಇಂತಹ ಅರ್ಜಿಗಳನ್ನು ಪ್ರಥಮಾದ್ಯತೆ ಮೇರೆಗೆ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಗ್ರಾಮ ವಾಸ್ತವ್ಯದ ಮೂಲ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅಶ್ವಿನ ಜಿ. ಗೌಡ ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಎಲ್ಲಾ ಅಗತ್ಯ ಭದ್ರತೆಗಳನ್ನು ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ರಾಜಾ ಪಿ. ಮಾತನಾಡಿ ಹೇರೂರ(ಬಿ) ಗ್ರಾಮ ಪಂಚಾಯತಿ ವ್ಯಾಪ್ತಿ ಸೇರಿದಂತೆ ಹೋಬಳಿ, ತಾಲೂಕು, ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಹೊಂದಿರುವುದು ಕಡ್ಡಾಯವಾಗಿದೆ ಎಂದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ವಿಶೇಷ ಅಧಿಕಾರಿ (ಜನತಾ ದರ್ಶನ) ಶ್ರೀನಿವಾಸ ಎಂ., ಮಹಾನಗರ ಪಾಲಿಕೆಯ ಆಯುಕ್ತ ಬಿ.ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶರಣಪ್ಪ, ಎ.ಎಸ್.ಪಿ ಅಕ್ಷಯ ಕುಮಾರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here