ಆಳಂದ: ನಾವು ರಾಜಕೀಯವನ್ನು ಸಮಾಜ ಸೇವೆಯೇ ಒಂದು ಮಾರ್ಗ ಎಂದು ಭಾವಿಸಿದ್ದೇವೆ ಆದರೆ ಆಳಂದ ಮಾಜಿ ಶಾಸಕ ಬಿ ಆರ್ ಪಾಟೀಲ ರಾಜಕೀಯ ಎನ್ನುವುದು ನನ್ನ ಉದ್ಯೋಗ ಎಂದು ಅವರೇ ಒಪ್ಪಿಕೊಂಡಿದ್ದಾರೆಂದು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಛೇಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮದು ಕೃಷಿ ಕುಟುಂಬ. ಕೃಷಿ ಕಾಯಕದ ಜೊತೆ ಸಾರಾಯಿ ಮಾರುವುದು ನಮ್ಮ ಕುಲ ಕಸುಬಾಗಿದೆ ಮತ್ತು ಸಾರಾಯಿ ಮಾರುವುದನ್ನು ನಾವು ಸರ್ಕಾರದಿಂದ ಅನುಮತಿ ಪಡೆದು ಮಾರುತ್ತೇವೆ. ಇಷ್ಟೇ ಅಲ್ಲದೇ ಶೈಕ್ಷಣಿಕ ಸಂಸ್ಥೆ ಆರಂಭಿಸಿ ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಡವರಿಗೆ ಶಿಕ್ಷಣ ಸೇವೆ ನೀಡುತ್ತಿದ್ದೇವೆ. ಸಾರಾಯಿ ವ್ಯಾಪಾರದ ಜೊತೆಗೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ನಾವು ಅದನ್ನು ಸೇವೆ ಎಂದು ಪರಿಗಣಿಸಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
೧೨ನೇ ಶತಮಾನದ ಶರಣರು ಸಾರಾಯಿ ಮಾರುವುದನ್ನು ಒಂದು ಕೂಡ ಕಾಯಕ ಎಂದು ಮಾನ್ಯತೆ ಮಾಡಿದ್ದರು ಹೀಗಾಗಿಯೇ ಬಸವಣ್ಣನವರು ಹೆಂಡದ ಮಾರಯ್ಯನವರನ್ನು ಶರಣರೆಂದು ಪರಿಚಯಿಸಿ ಅನುಭವ ಮಂಟಪದಲ್ಲಿ ಸ್ಥಾನ ಕಲ್ಪಿಸಿದ್ದರು. ಆದರೆ, ಬಿ ಆರ್ ಪಾಟೀಲರು ಪದೇ ಪದೇ ಸಾರಾಯಿ ಮಾರುವವರು ಹಿಂದುಳಿದ ವರ್ಗದವರೂ ಎಂದು ತಿಳಿದು, ತಾವು ಮೇಲ್ಜಾತಿ ಎಂದು ಭಾವಿಸಿ ಜಾತಿಯನ್ನು ಹೆಸರಿಡಿದು ಹೇಳುವುದರ ಮೂಲಕ ಹಿಂದುಳಿದ ವರ್ಗಗಳನ್ನು ಅಪಮಾನಿಸುವ ಅವರ ನಿಚ ಮಾನಸಿಕತೆ ತೋರಿಸುತ್ತದೆ ಎಂದು ಹೇಳಿದ್ದಾರೆ.
ಸಮಾಜವಾದವನ್ನು ಪ್ರತಿಪಾದಿಸುವ ನಾಯಕರಿಗೆ ಇದು ಶೋಭೆ ತರುವಂಥದ್ದಲ್ಲ. ಸಮಾಜವಾದವು ಎಲ್ಲ ಜಾತಿ, ಸಮುದಾಯಗಳನ್ನು ಸಮಾನತೆಯ ದೃಷ್ಟಿಯಲ್ಲಿ ನೋಡುತ್ತದೆ ಆದರೆ ತಾವು ಮಾತ್ರ ಪ್ರತಿ ಸಲ ಜಾತಿಯನ್ನು ಎಳೆದು ತರುವುದರ ಮೂಲಕ ರಾಜಕೀಯವನ್ನು ನಮ್ಮ ಮೇಲೆ ವೈಯಕ್ತಿಕವಾಗಿ ತೆಗೆದುಕೊಂಡು ಉದ್ದೇಶಪೂರ್ವಕವಾಗಿ ನಮ್ಮನ್ನು ಅಪಮಾನಿಸುವ ಕೆಲಸ ಮಾಡುತ್ತಿದ್ದೀರಿ. ಸಮಾಜವಾದವನ್ನು ಪ್ರತಿಪಾದಿಸುವ ರಾಜಕಾರಣಿಗೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುವುದನ್ನು ತಾವು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಆಳಂದ ತಾಲೂಕಿನ ಕಾಂಗ್ರೆಸ್‌ನಲ್ಲಿರುವ ಮುಖಂಡರು ಯಾರು ಸಾರಾಯಿ ಮಾರುವವರು ಇಲ್ಲವೇ? ಎಂದು ಪ್ರಶ್ನಿಸಿರುವ ಅವರು ಸಾರಾಯಿ ಮಾರುವ ವೃತ್ತಿಯಲ್ಲಿ ಇರುವ ಕಾಂಗ್ರೆಸ್ಸಿಗರನ್ನು ಪಕ್ಷದಿಂದ ಉಚ್ಛಾಟಿಸುವ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಭಿಯಾನವನ್ನು ಇಡೀ ತಾಲೂಕು ಸೇರಿದಂತೆ ರಾಜ್ಯಾದ್ಯಂತ ತಾವೇ ಏಕೆ ಆರಂಭಿಸಬಾರದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಮಹಾತ್ಮಾ ಗಾಂಧಿಯವರ ಅಹಿಂಸಾವಾದದಂತೆ ತಾವು ಎಲ್ಲ ರೀತಿಯ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸಲು ಏಕೆ ಒತ್ತಾಯಿಸಬಾರದು. ಸಾರಾಯಿ ಮಾರುವುದು ಕೆಟ್ಟ ಕೆಲಸವಾದರೆ, ಪ್ರಾಣಿ ಬಲಿಯೂ ಕೆಟ್ಟ ಕೆಲಸವಲ್ಲವೇ? ಸಿಗರೇಟ್, ಗುಟಖಾ ತಂಬಾಕು ಇದರ ಬಗ್ಗೆಯೂ ಧ್ವನಿ ಎತ್ತಬೇಕಲ್ಲವೇ? ಈ ಹಿಂದೆಯೂ ತಾವು ದಲಿತರ, ಅಲ್ಪ ಸಂಖ್ಯಾತರ ಬಗ್ಗೆ ಹೇಗೆ ಪದ ಬಳಸಿದ್ದಿರಿ ಎನ್ನುವುದನ್ನು ಜನ ನೋಡಿದ್ದಾರೆ. ಹಿಂದುಳಿದ ವರ್ಗದವರು ಮತ್ತು ಅಲ್ಪ ಸಂಖ್ಯಾತರ ಬಗ್ಗೆ ಬಿ ಆರ್ ಪಾಟೀಲರಿಗೆ ಎಳ್ಳಷ್ಟೂ ಗೌರವವಿಲ್ಲ ಸದಾ ಅವರನ್ನು ಅವಮಾನಿಸುವುದೇ ಅವರ ಗುರಿಯಾಗಿದೆ. ಕೇವಲ ರಾಜಕಾರಣದ ದೃಷ್ಟಿಯಿಂದ, ವೈಯಕ್ತಿಕವಾಗಿ ನಮ್ಮನ್ನು ಅಪಮಾನಿಸುವ ದೃಷ್ಟಿಯಿಂದ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ನಿಜವಾದ ರೈತರಾಗಿದ್ದು, ಈಗಲೂ ಪ್ರತಿದಿನ ಒಂದು ಸಲ ಹೊಲಕ್ಕೆ ಹೋಗಿ ಬರುತ್ತಾರೆ ತಮ್ಮ ತಂದೆಯವರ ಪುಣ್ಯಸ್ಮರಣೆಯಂದು ರೈತ ದಿನಾಚಾರಣೆ ಆಚರಿಸಿ ತಾಲೂಕಿನ ಪ್ರಗತಿಪರ ರೈತರನ್ನು ಸನ್ಮಾನಿಸಿ, ಗೌರವಿಸುವ ಕಾರ್ಯ ಮಾಡುತ್ತಾರೆ. ಯಾರೂ ನಿಜವಾದ ರೈತ ಎನ್ನುವುದು ಇಡೀ ತಾಲೂಕಿಗೆ ಗೊತ್ತಿದೆ. ತಾವು ವರ್ಷಕ್ಕೆ ಎಷ್ಟು ಸಲ ಹೊಲಕ್ಕೆ ಹೋಗುತ್ತೀರಿ ಎಂದು ಸ್ಪಷ್ಟಪಡಿಸಿ.
ನೂತನ ಕೃಷಿ ಕಾಯಿದೆಯಲ್ಲಿನ ಅಂಶಗಳು ನೀವೇ ಪ್ರತಿಪಾದಿಸುವ ಸ್ವಾಮಿನಾಥನ್ ಸಮಿತಿಯ ಅಂಶಗಳನ್ನು ಹೊಂದಿದೆ ಅಲ್ಲದೇ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವದ ಆಶಯ ಹೊಂದಿದೆ ಜೊತೆಗೆ ಎಪಿಎಂಸಿಗಳನ್ನು ಬಲ ಪಡಿಸುವ ಉದ್ದೇಶ ಹೊಂದಿದೆ. ಕಾಯಿದೆ ಅನುಷ್ಠಾನಕ್ಕೆ ಬಂದಾಗಲೇ ಅದರ ಸಾಧಕ, ಬಾಧಕಗಳ ಕುರಿತು ಗೊತ್ತಾಗುತ್ತದೆ ಆದರೆ, ಸಧ್ಯ ಕಾಂಗ್ರೆಸ್‌ನವರ ಸ್ಥಿತಿ ಹೇಗಾಗಿದೆ ಎಂದರೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಸಿದಂತಾಗಿದೆ ವ್ಯಂಗವಾಡಿದ್ದಾರೆ.
ಕಾಂಗ್ರೆಸ್ ಕೂಡಾ ೨-೩ ಬಾರಿ ಎಪಿಎಂಸಿ ರದ್ದು ಮಾಡಲು ನಿರ್ಧರಿಸಿತ್ತು ಸ್ವತ: ಆಗಿನ ಪ್ರಧಾನಿ ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವಿಷಯ ತಿಳಿಸಿದ್ದರು ಆದರೆ, ಕೇವಲ ವಿರೋಧ ಮಾಡುವುದಕ್ಕಾಗಿ ಮಾತ್ರ ನೂತನ ಕೃಷಿ ಕಾಯಿದೆಯನ್ನು ವಿರೋಧಿಸುತ್ತಿದ್ದಾರೆ ಅದು ಜನರಿಗೂ ಕೂಡ ಅರ್ಥವಾಗಿದೆ ಹೀಗಾಗಿ ಜನ ಈ ಕಾಯಿದೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಛೇಡಿಸಿದ್ದಾರೆ.
ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದವರನ್ನು ಅಪಮಾನಿಸುವುದೇ ಬಿ ಆರ್ ಪಾಟೀಲರ ಚಾಳಿಯಾಗಿದೆ ಎಂದು ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ ಟೀಕಿಸಿದ್ದಾರೆ.