ವಾಡಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕಾಗಿ ದೇಶದಾದ್ಯಂತ ಹಿಂದೂ ಭಕ್ತರಿಂದ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಪರಿಣಾಮ ಜ.೧೬ ಮತ್ತು ೧೭ ರಂದು ಎರಡು ದಿನಗಳ ಕಾಲ ವಾಡಿ ಪಟ್ಟಣದಲ್ಲಿ ನಿಧಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಅಯೋಧ್ಯೆ ಶ್ರೀರಾಮನ ಜನ್ಮಭೂಮಿ. ಹಲವು ವರ್ಷಗಳ ಹೋರಾಟದ ಫಲವಾಗಿ ಇಂದು ಆ ಪವಿತ್ರ ನೆಲದಲ್ಲಿ ಐತಿಹಾಸಿಕ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿದೆ. ಹಿಂದೂಗಳ ಭಾವನಾತ್ಮಕ ಶಕ್ತಿ ಕೇಂದ್ರವಾಗಿರುವ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ಹಾಗೂ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ಹಿಂದೂ ಜನಗಳ ದೇಣಿಗೆ ಸೇವೆ ತಲುಪಬೇಕು ಎಂಬುವುದು ಭಾರತೀಯ ಜನತಾ ಪಕ್ಷದ ಆಶಯವಾಗಿದೆ ಎಂದಿದ್ದಾರೆ.
ಅಂದು ಬೆಳಗ್ಗೆ ೯:೦೦ ಗಂಟೆಗೆ ನಗರದ ಶ್ರೀಲಕ್ಷ್ಮೀನಾರಾಯಣ ಮಂದಿರದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಮಾಜಿ ಶಾಸಕ ವಾಲ್ಮೀಕಿ ನಾಯಕ, ಭಾಜಪ ಅಧ್ಯಕ್ಷ ಬಸವರಾಜ ಪಂಚಾಳ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಭಾಗವತ ಸುಳೆ ಸೇರಿದಂತೆ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ರಾಮಭಕ್ತರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.