ಮೋದಿ ಬರೆದ ಮರಣ ಶಾಸನ ಸುಡುತ್ತೇವೆ: ದಿವಾಕರ

0
53

ಕಲಬುರಗಿ: ತಾನು ರೈತಪರ ಎಂದು ಹೇಳುತ್ತಲೇ ಪ್ರಧಾನಿ ನರೇಂದ್ರ ಮೋದಿ ರೈತರ ಮರಣ ಶಾಸನ ಬರೆದಿದ್ದಾರೆ. ರೈತರು ಆರ್‌ಕೆಎಸ್ ನೇತೃತ್ವದಲ್ಲಿ ಆ ಶಾಸನಗಳನ್ನು ಬೆಂಕಿಗೆ ಎಸೆದು ಸುಡುತ್ತಿದ್ದಾರೆ ಎಂದು ರೈತ ಕೃಷಿ ಕರ್ಮಿಕ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್ ಹೇಳಿದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಜನವಿರೋಧಿ ಕರಾಳ ಕೃಷಿ ಶಾಸನಗಳ ವಿರುದ್ಧ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ವತಿಯಿಂದ ವಾಡಿ ನಗರದಲ್ಲಿ ಉದ್ಘಾಟನೆಗೊಂಡ ರೈತರ ಆಗ್ರಹ ಜೀಪ್ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ದುರಾಡಳಿತದಿಂದಾಗಿ ದೇಶದ ಅನ್ನದಾತರ ಬದುಕು ಸರ್ವನಾಶವಾಗಿದೆ. ಈಗ ಬಿಜೆಪಿ ತರುತ್ತಿರುವ ಹೊಸ ಮಸೂದೆಗಳು ರೈತರು ಬದುಕುವ ಹಕ್ಕನೇ ಕಸಿದುಕೊಂಡು ನಿರ್ಗತಿಕರನ್ನಾಗಿಸಲು ಹೊರಟಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಬಂಡವಾಳಿಗರ ಲಾಭದ ಕಾರ್ಖಾನೆಯನ್ನಾಗಿ ಪರಿವರ್ತಿಸಲು ಸರಕಾರ ಟೊಂಕಕಟ್ಟಿ ನಿಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಲಕ್ಷಾಂತರ ರೈತರು ಕೃಷಿ ನೀತಿಗಳನ್ನು ವಿರೋಧಿಸಿ ದೇಶದಾದ್ಯಂತ ಹೋರಾಟ ಬೆಳೆಸುತ್ತಿದ್ದಾರೆ. ದೇಹಲಿಗೆ ಮುತ್ತಿಗೆ ಹಾಕಲು ತೆರಳಿದ ಅಸಂಖ್ಯಾತ ರೈತರನ್ನು ಘಾಜಿಯಾಬಾದ್ ಗಡಿಯಲ್ಲೇ ಸರಕಾರ ತಡೆದಿದೆ. ಹೆದ್ದಾರಿಗಳನ್ನು ಧ್ವಂಸ ಮಾಡಿ ರೈತರು ದೆಹಲಿ ಪ್ರವೇಶಿಸದಂತೆ ನೋಡಿಕೊಳ್ಳಲಾಗಿದೆ.

ಪೊಲೀಸ್ ಬಲ ಪ್ರಯೋಗಿಸುವ ಮೂಲಕ ಸರಕಾರ ರೈತರ ಮೇಲೆ ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿ ಹೋರಾಟ ಮುರಿಯಲು ಪ್ರಯತ್ನಿಸಿದೆ. ಥರಗುಟ್ಟುವ ಚಳಿಯಲ್ಲಿ ದೇಶದ ನಾನಾ ರಾಜ್ಯಗಳ ಲಕ್ಷಾಂತರ ರೈತರು ಹೋರಾಟ ಮುಂದುವರೆಸಿದ್ದಾರೆ. ೪೦ ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಎಲ್ಲಾ ಸರಕಾರಗಳು ಕೇವಲ ಕಾರ್ಪೋರೇಟ್ ಬಂಡವಳಗಾರರ ಪರವಾಗಿವೆ ಎಂಬ ಕಟುಸತ್ಯ ಬಹಿರಂಗಗೊಂಡಿದೆ. ಯಾವ ಪಕ್ಷಗಳೂ ಜನಪರವಾಗಿಲ್ಲ ಎಂಬುದು ಮನವರಿಕೆಯಾಗಿದೆ. ರಾಜಿರಹಿತ ಹೋರಾಟದ ಮೂಲಕ ಈ ಜನವಿರೋಧಿ ನೀತಿಗಳನ್ನು ಸೋಲಿಸಬೇಕಿದೆ ಎಂದರು.

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಅವರು ಕೆಂಪು ಭಾವುಟ ಪ್ರದರ್ಶಿಸುವ ಮೂಲಕ ರೈತ ಜಾಗೃತಿ ಜೀಪ್ ಜಾಥಾ ಉದ್ಘಾಟಿಸಿದರು. ಆರ್‌ಕೆಎಸ್ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಎಐಡಿವೈಒ ಅಧ್ಯಕ್ಷ ಶರಣು ವಿ.ಕೆ, ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಹೇರೂರ, ಭಾಗಣ್ಣ ಬುಕ್ಕಾ, ಮಲ್ಲಣ್ಣ ದಂಡಬಾ, ಮಲ್ಲಿನಾಥ ಹುಂಡೇಕಲ್, ಶಿವುಕುಮಾರ ಆಂದೋಲಾ, ರಾಜು ಒಡೆಯರ, ವಿಠ್ಠಲ ರಾಠೋಡ, ಗೋವಿಂದ ಯಳವಾರ, ದತ್ತಾತ್ರೇಯ ಹುಡೇಕರ್ ಜಥಾದಲ್ಲಿ ಪಾಲ್ಗೊಂಡಿದ್ದರು. ವಾಡಿ, ನಾಲವಾರ, ಇಂಗಳಗಿ, ಕುಂದನೂರ, ಚಾಮನೂರ, ಕೊಲ್ಲೂರ, ಕುಲಕುಂದಾ, ಲಾಡ್ಲಾಪುರ, ಹಳಕರ್ಟಿ, ಅಳ್ಳೊಳ್ಳಿ, ಅಣ್ಣಿಕೇರಾ ಗ್ರಾಮಗಳಲ್ಲಿ ರೈತರ ಸಭೆಗಳನ್ನು ನಡೆಸುವ ಮೂಲಕ ಕೃಷಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು. ಇದೇ ವೇಳೆ ಆರ್‌ಕೆಎಸ್ ಕಾರ್ಯಕರ್ತರು ಹಳ್ಳಿ ರೈತರಿಂದ ಹೋರಾಟಕ್ಕಾಗಿ ದೇಣಿಗೆ ಸಂಗ್ರಹಿಸಿದರು. ರೈತರು ಧನ ಸಹಾಯ ನೀಡಿ ಹೋರಾಟವನ್ನು ಬೆಂಬಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here