ಶಹಾಬಾದ:ಬೆಳಗಾವಿ ಸೇರಿದಂತೆ ಗಡಿಭಾಗದ ಹಲವು ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರಕಾರ ಬದ್ಧವೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ವಿರುದ್ಧ ಸೋಮವಾರ ನಗರದ ಕರವೇಯಿಂದ ಪ್ರತಿಭಟನೆ ನಡೆಸಿ, ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ತಾಪೂರ ಕರವೇ ಅಧ್ಯಕ್ಷ ನರಹರಿ ಕುಲಕರ್ಣಿ ಮಾತನಾಡಿ, ಗಡಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುವ ಮೂಲಕ ಕನ್ನಡಿಗೆ ಭಾವನೆಗಳಿಗೆ ದಕ್ಕೆ ತರುವಂಥ ಕೆಲಸ ಶಿವಸೇನೆಯಿಂದ ನಡೆಯುತ್ತಿದೆ.ಇದು ಸರಿಯಲ್ಲ. ನೆಲ, ಜಲ ವಿಷಯದಲ್ಲಿ ಈಗಾಗಲೆ ಇತ್ಯರ್ಥವಾಗಿದೆ. ಮಹಾಜನ್ ವರದಿಯೇ ಅಂತಿಮ. ಮುಖ್ಯಮಂತ್ರಿ ಸ್ಥಾನದಲ್ಲಿರೋ ವ್ಯಕ್ತಿ ಈ ರೀತಿ ಹೇಳಿಕೆ ನೀಡಬಾರದು.ಮಹಾರಾಷ್ಟ್ರ ಗಡಿ ವಿವಾದ ಬೂದಿ ಮುಚ್ಚಿದ ಕೆಂಡದಂತೆ ಆಗಾಗ್ಗೆ ಹೊಗೆಯಾಡುತ್ತಲೇ ಇರುತ್ತದೆ. ಸುಮ್ಮನಿರುವ, ಕನ್ನಡಿಗರನ್ನು ಪದೇ ಪದೇ ಕೆಣಕುವುದು ಮರಾಠಿಗರ ಕಾಯಕವಾಗಿಬಿಟ್ಟಿದೆ. ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದ್ದರೂ ಅಲ್ಲಿನ ನಾಯಕರು ಉದ್ಧಟತನದ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸುತ್ತಲೇ ಇದ್ದಾರೆ.ಕೂಡಲೇ ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಿ, ಕನ್ನಡಿಗರಿಗೆ ಕ್ಷಮಾಪಣೆ ಕೋರಬೇಕು.ಇಲ್ಲದಿದ್ದರೇ ಕರವೇ ಕಾರ್ಯಕರ್ತರು ಠಾಕ್ರೆಗೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ನಗರ ಸಂಚಾಲಕ ವಿಶ್ವರಾಜ ಫಿರೋಜಬಾದ ಮಾತನಾಡಿ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸಿಎಂ ಆದ ಆರಂಭದಿಂದಲೇ ಕರ್ನಾಟಕ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿ ವಿವಾದ ಎಬ್ಬಿಸುತ್ತಲೇ ಇದ್ದಾರೆ. ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಕರ್ನಾಟದ ಕೆಲ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ ಎಂಬ ಉದ್ಧವ್ ಠಾಕ್ರೆ ಹೇಳಿಕೆ ಕನ್ನಡಿಗರ ಪಿತ್ತ ನೆತ್ತಿಗೇರಿದ್ದು, ಹೋರಾಟಕ್ಕೆ ಇಳಿಯುವಂತೆ ಮಾಡಿದೆ.ಕೂಡಲೇ ಕನ್ನಡಿಗರಿಗೆ ಕ್ಷಮಾಪಣೆ ಕೋರಬೇಕು.ಇಲ್ಲದಿದ್ದರೇ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದರು.ನಂತರ ಕಂದಾಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಗುರುರೇವಣಸಿದ್ಧ ಪೂಜಾರಿ, ಬಸವರಾಜ ಮಯೂರ, ಶಿವಕುಮಾರ ಕಾರೊಳ್ಳಿ,ಶಿವರಾಜ ಇಜೇರಿ, ಭೂತಾಳಿ ಪೂಜಾರಿ,ಪವನ ಭೋಸಗಿ, ಯಲ್ಲಾಲಿಂಗ ಪೂಜಾರಿ, ಅಶೋಕ ಭಜಂತ್ರಿ, ಭೀಮಣ್ಣ ಕೌಲಗಿ, ಸಂತೋಷ ಕೊಡಸಾ, ನಿಂಗರಾಜ ನಾಚವಾರ,ನಾಗರಾಜ ಯಡ್ರಾಮಿ, ವಿರಾಟ ಭೋಸಗಿ, ಶಿವಕುಮಾರ ಬುರ್ಲಿ ಇತರರು ಇದ್ದರು.