ಕಲಬುರಗಿ: ಕಳೆದ ವರ್ಷ ೨೦೨೦ನೇ ಸಾಲಿನಲ್ಲಿ ದೇಶದ ವಿವಿಧೆಡೆ ಸಂಭವಿಸಿದ್ದ ರಸ್ತೆ ಅಪಘಾತಗಳಲ್ಲಿ ಒಟ್ಟು ೪.೫೧ ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದರೆ ಎಂದು ವಾಡಿ ಠಾಣೆಯ ಪಿಎಸ್‌ಐ ವಿಜಯಕುಮಾರ ಭಾವಗಿ ಕಳವಳ ವ್ಯಕ್ತಪಡಿಸಿದರು.
ವಾಡಿ ಪಟ್ಟಣದ ಎಸಿಸಿ ಟ್ರಸ್ಟ್ ಆಸ್ಪತ್ರೆಯಲ್ಲಿ ವಾಡಿ ಠಾಣೆ ವತಿಯಿಂದ ವಾಹನ ಚಾಲಕರಿಗಾಗಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರ ಮತ್ತು ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ವಾಹನ ಚಾಲಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಅಮಾಯಕ ಜನರು ಜೀವ ಕಳೆದುಕೊಳ್ಳುವಂತಾಗಿದೆ. ಮದ್ಯಪಾನ ಸೇವಿಸಿ ವಾಹನ ಓಡಿಸುವುದು, ಥ್ರಿಬಲ್ ರೈಡಿಂಗ್ ಬೈಕ್ ಸವಾರಿ, ಬೈಕ್ ಓಡಿಸುವಾಗ ಮೋಬಾಯಿಲ್ ನೋಡುವುದು ಮಾತಾಡುವುದು ಮತ್ತು ಅತಿಯಾದ ವೇಗ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತವೆ. ಚಾಲನಾ ಪರವಾನಿಗೆ ಮತ್ತು ಜೀವವಿಮೆ ಇಲ್ಲದೇಯಿರುವುದು ದಂಡಾಪರಾಧವಾಗುತ್ತದೆ. ಚಾಲಕರಲ್ಲಿ ಕಾನೂನಿನ ಭಯ ಮೂಡಿಸಲು ದಂಡ ವಿಧಿಸಲಾಗುತ್ತದೆ. ಕಾನೂನು ಪಾಲಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಪಿಎಸ್‌ಐ ಭಾವಗಿ, ನಿಮ್ಮ ಜೀವದ ಕಾಳಜಿಯ ಜತೆಗೆ ಪ್ರಯಾಣಿಕರ ಜೀವದ ಕಾಳಜಿಯೂ ಹೊಂದಬೇಕು ಎಂದು ಚಾಲಕರಿಗೆ ಕಿವಿಮಾತು ಹೇಳಿದರು.
ಎಸಿಸಿ ಟ್ರಸ್ಟ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜಯ ಅಳ್ಳೊಳ್ಳಿ ಮಾತನಾಡಿ, ಸುರಕ್ಷಿತ ವಾಹನ ಚಾಲನೆಗೆ ಚಾಲಕರ ಆರೋಗ್ಯವೂ ಮುಖವಾಗುತ್ತದೆ. ಹೃದಯಾಘಾತದಂತ ಅನಿರೀಕ್ಷಿತ ಅನಾರೋಗ್ಯ ಪರಿವರ್ತನೆಯು ವಾಹನ ಅಪಘಾತಕ್ಕೆ ಕಾರಣವಾಗಿ ಹತ್ತಾರು ಜನ ಪ್ರಯಾಣಿಕರ ಜೀವ ನುಂಗುತ್ತದೆ. ರಕ್ತದೊತ್ತಡ, ಮಧುಮೇಹ, ನೇತ್ರ ತೀಕ್ಷಣತೆ, ದೇಹದ ತೂಕ ಸರಿಯಾಗಿದ್ದ ಚಾಲಕರು ಮಾತ್ರ್ರ ವಾಹನ ಚೆಲಾಯಿಸಲು ಅರ್ಹರಾಗಿರುತ್ತಾರೆ. ಆದ್ದರಿಂದ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಕಾರು ಚಾಲಕರ ಸಂಘದ ಮುಖಂಡ ಕರಣಪ್ಪ ಆಂದೋಲಾ, ಕ್ರೂಸರ್ ಚಾಲಕರ ಸಂಘದ ಬಶೀರ್ ಖಾನ್, ಆಟೋ ಚಾಲಕರ ಸಂಘದ ಸದ್ಧಾಮ್ ಹುಸೇನ್, ಎಸಿಸಿ ಟ್ರಸ್ಟ್ ಆಸ್ಪತ್ರೆಯ ಸಿಬ್ಬಂದಿಗಳಾದ ಶಿವುಕುಮಾರ ಪುರಮಕರ, ಪ್ರೇಮಕುಮಾರ ಚವ್ಹಾಣ, ರಾಘವೇಂದ್ರ ಗುತ್ತೇದಾರ, ದೀಪಕ ಮಾನೆ, ಶೃತಿ ಬನ್ನೇಟಿ, ಗಾಯತ್ರಿ ನಾಟೇಕರ, ಮುಖ್ಯ ಪೇದೆಗಳಾದ ದೊಡ್ಡಪ್ಪ ಪೂಜಾರಿ, ದತ್ತಾತ್ರೇಯ ಜಾನೆ, ಚಾಲಕರಾದ ಚಾಂದ್, ಬಸವರಾಜ ಯಕ್ಚಿಂತಿ ಪಾಲ್ಗೊಂಡಿದ್ದರು. ಇದೇ ವೇಳೆ ನೂರಾರು ಜನ ಖಾಸಗಿ ವಾಹನ ಚಾಲಕರ ಆರೋಗ್ಯ ತಪಾಸಣೆ ಮಾಡಲಾಯಿತು.