ಕಲಬುರಗಿ: ಮ್ಯಾನ್ ಹೋಲ್ ಕ್ಲೀನ್ ಮಾಡಲು ಹೋಗಿ ಉಸಿರುಗಟ್ಟಿ ಇಬ್ಬರು ಮೃತಪಟ್ಟಿದ್ದು, ಇನ್ನೂರ್ವ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿರುವ ಘಟನೆ ಕೈಲಾಶ್ ನಗರದಲ್ಲಿ ಇಂದು ನಡೆದಿದೆ.
ಉಮರ್ ಕಾಲೋನಿ ನಿವಾಸಿ ಲಾಲ್ ಅಹ್ಮದ್ (25), ರಶೀದ್ (30) ಮೃತ ದುರ್ದೈವಿಗಳಾಗಿದ್ದು, ರಾಜ್ ಅಹ್ಮದ್ ಎಂಬಾತನ ಸ್ಥಿತಿ ಗಂಭೀರದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಜಲ ಮಂಡಳಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ, ಅಧಿಕಾರಿಗಳ ಒತ್ತಡದಿಂದ ಕೆಟ್ಟು ನಿಂತ ಡ್ರೈನೇಜ್ಗೆ ಇಳಿದು ಕ್ಲೀನ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ.
20 ಅಡಿ ಆಳವಿದ್ದು ಮ್ಯಾನ್ ಹೋಲ್ ನಲ್ಲಿ ಮೊದಲು ಓರ್ವ ಕಾರ್ಮಿಕ ಡ್ರೈನೇಜ್ ಒಳಗೆ ಇಳಿದಿದ್ದಾನೆ. ಆತ ಉಸಿರುಗಟ್ಟಿ ಒಳಗೆ ಕುಸಿದಾಗ ಆತನನ್ನು ಉಳಿಸಲು ಮತ್ತೋರ್ವ ಇಳಿದು ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇವರಿಬ್ಬರನ್ನು ರಕ್ಷಿಸಲು ಹೋದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಕಾರ್ಮಿಕರು ಒಳಗೆ ಇಳಿಯಲು ಹಿಂದೇಟು ಹಾಕಿದರೂ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಒಳಗೆ ಇಳಿಸಿದ್ದರಿಂದ ಅವಘಡ ನಡೆದಿದೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಜಿಮ್ಸ್ ಆಸ್ಪತ್ರೆ ಮುಂದೆ ರಸ್ತೆ ತಡೆದು ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಯಂತ್ರಗಳ ಮೂಲಕ ಮಾಡಬೇಕಿದ್ದ ಕೆಲಸವನ್ನು ಮನುಷ್ಯರ ಮೂಲಕ ಮಾಡಿಸಲಾಗಿದೆ. ತಕ್ಷಣ ಅಧಿಕಾರಿಗಳ ಎಚ್ಚೆತ್ತಿದ್ದರೂ ಈ ಘಟನೆ ನಡೆಯುತ್ತಿರಲಿಲ್ಲ. ಮೃತರ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.