ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಮಾತೋಶ್ರೀ ಗಂಗಮ್ಮ ಬಣಗಾರ ಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ ಮಾತೋಶ್ರೀ ಗಂಗಮ್ಮ ಬಣಗಾರ ಸೇವಾ ಪ್ರಶಸ್ತಿಗೆ ಸಾಮಾಜಿಕ ಕಳಕಳಿಯ ಜನ-ಸ್ನೇಹಿ ಅಧಿಕಾರಿ ಎಂದೇ ಹೆಸರಾಗಿರುವ, ರುಕ್ಮಾಪುರ ಗ್ರಾಮದವರೂ ಆಗಿರುವ ನಿವೃತ್ತ ಎಸ್.ಪಿ. ಚಂದ್ರಕಾಂತ ಎನ್.ಭಂಡಾರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟಿನ ಸಂಚಾಲಕ ಸುಭಾಷ ಬಣಗಾರ ತಿಳಿಸಿದರು.
ನಗರದ ಗರುಡಾದ್ರಿಕಲಾ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗುರುತರವಾದ ಕಾರ್ಯ ಮಾಡಿದವರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಕಳೆದ ವರ್ಷ ಸತ್ತ ಮೇಲೂ ಸಮಾಜ ಸೇವೆ ಮಾಡಿ ಐವರ ಬಾಳಿಗೆ ಬೆಳಕಾದ ರುಕ್ಮಾಪುರ ಗ್ರಾಮದ ವಿದ್ಯಾರ್ಥಿ ‘ಕಾರ್ತಿಕ’ನ ಹೆಸರಿನಲ್ಲಿ ಅವರ ತಂದೆ-ತಾಯಿಯವರಾದ ಶ್ರೀ ಕಿರಪ್ಪ ಮತ್ತು ಶ್ರೀಮತಿ ಭಾರತಿ ಬಡಗಾ ಅವರಿಗೆ ನೀಡಿ ಗೌರವಿಸಲಾಗಿತ್ತು. ದಸರಾ ಹಬ್ಬದ ಸಂದರ್ಭದಲ್ಲಿ ನೀಡುವ ಈ ಪ್ರಶಸ್ತಿಯನ್ನು ಕೊರೊನಾ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಈ ಪ್ರಶಸ್ತಿಯನ್ನು ನಿವೃತ್ತ ಎಸ್.ಪಿ. ಚಂದ್ರಕಾಂತ ಎನ್.ಭಂಡಾರೆ ಅವರಿಗೆ, ಇದೇ ೨೦೨೧, ಜನೆವರಿ ೩೧ರಂದು ಬೆಳಿಗ್ಗೆ ೧೧ಕ್ಕೆ ರುಕ್ಮಾಪುರ ಗ್ರಾಮದ ಚಂದ್ರಕಾಂತ ಎನ್.ಭಂಡಾರೆ ಅವರ ತೋಟದಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ರುಕ್ಮಾಪುರ ಹಿರೇಮಠ ಸಂಸ್ಥಾನದ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ವಹಿಸುವರು. ಶಾಸಕರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ನರಸಿಂಹನಾಯಕ (ರಾಜುಗೌಡ) ಅವರು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಡಾ.ಡಿ.ಬಿ.ಪಾಟೀಲ್, ತಾಲೂಕು ಪಂಚಾಯತ ಸದಸ್ಯ ಸುರೇಂದ್ರ ನಾಯಕ್ (ಪಪ್ಪುಧಣಿ), ಸುರಪುರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ, ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯ ಸ್ವಾಮಿ ಜಾಲಿಬೆಂಚಿ, ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ಹಳ್ಳಿ ಆಗಮಿಸುವರು. ಅಧ್ಯಕ್ಷತೆಯನ್ನು ಮಾತೋಶ್ರೀ ಗಂಗಮ್ಮ ಬಣಗಾರ ಸೇವಾ ಟ್ರಸ್ಟ್ನ ಅಧ್ಯಕ್ಷ ಅಶೋಕ ಬಣಗಾರ ವಹಿಸುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಜಹಾಗೀರದಾರ ವಿಜಯಕುಮಾರ ಬಣಗಾರ ಪ್ರಕಾಶ ಬಣಗಾರ ಇದ್ದರು.