ಯಾದಗಿರಿ: ತಾಲೂಕಿನ ಬೇವಿನಾಳ ಗ್ರಾಮದಲ್ಲಿ ಕಳೆದ ೧೧ನೇ ತಾರೀಖು ಮರೆಪ್ಪ ಶೆಳಿಗೆಪ್ಪ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಗಲಾಟೆಯಲ್ಲಿ ಕಾದ ಎಣ್ಣೆಗೆ ತಳ್ಳಿರುವ ಬಗ್ಗೆ ಆರೋಪಿಸಲಾಗಿತ್ತು.ಅಂದು ಎಣ್ಣೆಯಿಂದ ಸುಟ್ಟು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ ಮರೆಪ್ಪ ಗುರುವಾರ ಮದ್ಹ್ಯಾನ ಮೃತರಾಗಿದ್ದಾರೆ.
ಮರೆಪ್ಪ ಮೃತನಾದ ಸುದ್ದಿ ತಿಳಿದು ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು,ಅಲ್ಲದೆ ಪಾರ್ಥಿವ ಶರೀರವನ್ನು ಸಂಜೆ ಬೇವಿನಾಳ ಗ್ರಾಮಕ್ಕೆ ತಂದಾಗ ಅವರ ಕುಟುಂಬಸ್ಥರು ಹಾಗು ವಿವಿಧ ಸಂಘಟನೆಗಳ ಮುಖಂಡರು ಮರೆಪ್ಪನ ಸಾವಿಗೆ ಕಾರಣರಾದವರನ್ನು ಬಂಧಿಸುವವರೆಗೆ ಶವ ಸಂಸ್ಕಾರ ಮಾಡುವುದಿಲ್ಲವೆಂದು ಪಟ್ಟು ಹಿಡಿದರು.ನಂತರ ಗ್ರಾಮಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವನದ ಜೊತೆಗೆ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ,ನಂತರ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ನಾಲ್ಕು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ ನಂತರ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕ ಮಾಳಪ್ಪ ಕಿರದಹಳ್ಳಿ ಸೇರಿದಂತೆ ಅನೇಕ ಮುಖಂಡರಿದ್ದರು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಮುಂಜಾಗ್ರತೆ ವಹಿಸಲಾಗಿತ್ತು.
ಇಬ್ಬರು ಆರೋಪಿಗಳ ಬಂಧನ-ಕಾದ ಎಣ್ಣೆಯಲ್ಲಿ ಬಿದ್ದು ಮೃತಪಟ್ಟ ಮರೆಪ್ಪನ ಘಟನೆಗೆ ಸಂಬಂಧಿಸಿದಂತೆ ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿತರಾದ ಹನುಮಪ್ಪ ಶಿವಪ್ಪ ಜಾಲಹಳ್ಳಿ (೪೫ ವರ್ಷ),ತಿಮ್ಮಣ್ಣ ತಳವಾರ (೩೩ ವರ್ಷ) ಇಬ್ಬರನ್ನು ವಿಜಯಪುರ ಜಿಲ್ಲೆಯ ಇಂಡಿ ಬಳಿಯ ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸಿರುವ ಬಗ್ಗೆ ತಿಳಿದು ಬಂದಿದೆ.ಒಟ್ಟು ನಾಲ್ಕು ಜನರ ಮೇಲೆ ದೂರು ದಾಖಲಾಗಿದ್ದು,ಇನ್ನುಳಿದ ಇಬ್ಬರನ್ನು ಬಂಧಿಸಬೇಕಿದೆ.