ಆಳಂದ: ಗ್ರಾಮೀಣ ನೀರು ಸರಬರಾಜು, ಲೋಕೋಪಯೋಗಿ, ಭೂಸೇನಾ, ನೀರಾವರಿ ಇನ್ನಿತರ ಇಲಾಖೆಗೆ ವಹಿಸಿದ್ದ ಪ್ರತ್ಯೇಕ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯತ ಕಚೇರಿಯಲ್ಲಿ ಮಂಗಳವಾರ ಕರೆದ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯ (ಕೆಡಿಪಿ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೀರು ಒದಗಿಸುವ ಮತ್ತು ಅಂಗನವಾಡಿ ಕಟ್ಟಡ ರಸ್ತೆ, ಪಡಸಾವಳಿ ಕೆರೆ ಕಾಮಗಾರಿ ಆಗದಿದ್ದರೆ ಪುನರ ಟೆಂಡರ್ ಕರೆಯಬೇಕು. ಪಡಸಾವಳಿಲ್ಲಿ ಕೆರೆಗೆ ಸ್ಥಳೀಯ ಒಪ್ಪಿಗೆ ನೀಡದೆ ಹೋದರೆ ಅನುಮತಿ ಪಡೆದು ಕಾಮಗಾರಿ ಬೇರೆಡೆ ಸ್ಥಳಾಂತರಿಸಬೇಕು. ಅಲ್ಲದೆ, ಲೋಕೋಪಯೋಗಿ ಹಾಗೂ ಪಿಎಂಜಿಎಸ್‌ವೈ ಇಲಾಖೆಯ ರಸ್ತೆ ನಿರ್ಮಾಣ ಕೆಲಸಕ್ಕೆ ಹೊಲದವರು ಅಡ್ಡಿಯಾದರೆ ಪೊಲೀಸರ ಸಹಾಯದಿಂದ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು. ಕಾಮಗಾರಿ ಗುತ್ತಿಗೆ ಪಡೆದವರು ಕೆಲಸ ನಿರ್ವಹಿಸದೆ ಹೋದರೆ ಅಂತವರನ್ನು ಕಪ್ಪು ಪಟ್ಟಿಗೆ ಸೀಫಾರಸ್ಸು ಕೈಗೊಳ್ಳಬೇಕು ಎಂದರು.
ಗ್ರಾಮೀಣ ನೀರು ಸರಬರಾಜು ಎಇಇ ಸಂಗಮೇಶ ಬಿರಾದಾರ ಅವರು, ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡ ಕಾಮಗಾರಿಯ ಪೂರ್ಣ ಹಾಗೂ ಬಾಕಿ ಇರುವ ಕುರಿತು ಮಾಹಿತಿ ಒದಗಿಸಿದರು. ಲೋಕೋಪಯೋಗಿ ಉಪ ವಿಭಾಗದ ಎಇಇ ಈರಣ್ಣಾ ಕುಣಕೇರಿ ವರದಿ ಮಂಡಿಸಿ, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಆಯ್ಕೆಯಾದ ಹೋದಲೂರ ತಾಂಡಾ, ಭೂಸನೂರ ತಾಂಡಾ, ಜಮಗಾ ಕೆ. ಗ್ರಾಮಗಳಲ್ಲಿ ತಲಾ ೪೫ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಆಯ್ಕೆಯಾಗಿವೆ. ಗ್ರಾಮೀಣ ಮತಕ್ಷೇತ್ರದ ಕುದಮುq ಗ್ರಾಮಕ್ಕೆ ೪೫ ಲಕ್ಷ, ಮುಡಕಿ ಗ್ರಾಮ ಹಾಗೂ ತಾಂಡಾಕ್ಕೆ ೩೯ ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ ನಡೆಯಲಿದೆ. ೬೪ ಲಕ್ಷ ರೂ. ಮೊತ್ತದಲ್ಲಿ ಮುಖ್ಯ ಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿಯ ನಿಂಬರಗಾ ನಿಂಬಾಳ ಮಾರ್ಗದ ಅರ್ಧ ಕಿಲೋ ಮೀ ರಸ್ತೆ ನಿರ್ಮಾಣ ಮಂಜೂರಾಗಿದೆ ಎಂದರು. ನರ್ಬಾಡ್ ಆರ್‌ಐಡಿಎಫ್-೨೫ ಹೆಡ್‌ನಲ್ಲಿ ೩೨ನೇ ರಾಜ್ಯ ಹೆದ್ದಾರಿಯಿಂದ ತಡಕಲ್ ವಾಯ ಕಿಣ್ಣಿಸುಲ್ತಾನ ಹೆದ್ದಾರಿಗೆ ರಸ್ತೆ ನಿರ್ಮಾಣಕ್ಕೆ ೧.೨೫ ಕೋಟಿ ಕಾಮಗಾರಿ ನಡೆಯಬೇಕಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರು, ಮುಂಗಾರು ಹಂಗಾಮಿಗೆ ೧೦೮ ಮಿ.ಮೀ ಮಳೆಯ ಪೈಕಿ ೭೮ ಮಿ.ಮೀ ಮಳೆಯಾಗಿದ್ದು, ಇದರಿಂದ ಬಿತ್ತನೆಗೆ ಪೂರಕವಾಗಿಲ್ಲ. ಹೊಣೆ ಹವೆ ಮುಂದುವರೆದಿದ್ದು, ಬಿತ್ತನೆ ಗುರಿ ಮತ್ತು ಸಾಧನೆ ವಿವರ ನೀಡಿದ ಅವರು, ಐವರು ಆತ್ಮಹತ್ಯೆ ಮಾಡಿಕೊಂಡ ರೈತ ಕುಟಂಬಕ್ಕೆ ಪರಿಹಾರ ಒದಗಿಸಲಾಗಿದೆ. ಕೃಷಿ ಹೂಂಡ ನಿರ್ಮಿಸಿದ ರೈತರಿಗೆ ಬಿಲ್ ಪಾವತಿಸದಿರುವ ದೂರುಗಳು ಬಂದಿವೆ ಏಕೆ ಬಿಲ್ ಪಾವತಿಸುತ್ತಿಲ್ಲ ಸುಳ್ಳು ನೆಪ ಹೇಳಬೇಡಿ ಕೆಲಸ ಮಾಡಿಕೊಂಡ ರೈತರಿಗೆ ಬಿಲ್ ಕೊಡಿ ಎಂದು ಶಾಸಕರು ಹೇಳಿದರು.
ಸಿಡಿಪಿಓ ಶ್ರೀಕಾಂತ ಮೇಂಗಜಿ ಅವರು ಇದುವರೆಗೂ ಸುಮಾರು ೧೯೪೨೪ ಭಾಗ್ಯಲಕ್ಷ್ಮೀ ಬಾಂಡ ವಿತರಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ೨೨ ಸಾವಿರ ಬಾಂಡ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಬಾಂಡ್ ಪೂರೈಕೆಯಾದ ಮೇಲೆ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಜಗನಾಥ ಕೋರಳ್ಳಿ ಹಂಗಾಮಿನಲ್ಲಿ ರಣ್ಯಕರಣದ ಪ್ರಗತಿ ಮಂಡಿಸಿದರು.
ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ, ತೋಟಗಾರಿಕೆ ಅಧಿಕಾರಿ ಸುರೇಂದ್ರನಾಥ, ಬಿಸಿಎಂ ಅಧಿಕಾರಿ ಅಂಬವ್ವ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಫುಲಾರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ, ಜಿಪಂ ಎಇಇ ಲಿಂಗರಾಜ ಇನ್ನಿತರರು ವರದಿ ಮಂಡಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ನಾಗಮ್ಮ ಗುತ್ತೇದಾರ, ಉಪಾಧ್ಯಕ್ಷ ಗುರುನಾಥ ಪಾಟೀಲ, ಸದಸ್ಯ ಪ್ರಭು ಸರಸಂಬಿ, ಜಿಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಇಒ ಅನಿತಾ ಕೊಂಡಾಪೂರ, ಸಿಪಿಐ ಶಿವಾನಂದ ಗಾಣಿಗರ್, ಮುಖಂಡ ಮಲ್ಲಣ್ಣಾ ನಾಗೂರೆ, ವೀರಣ್ಣಾ ಮಂಗಾಣೆ, ಅಶೋಕ ಗುತ್ತೇದಾರ, ತಡಕಲ್ ಗ್ರಾಪಂ ಅಧ್ಯಕ್ಷ ಶಿವುಪುತ್ರ ಬೆಳ್ಳೆ, ಶ್ರೀಮಂತ ನಾಮಣೆ ಮತ್ತಿತರರು ಪಾಲ್ಗೊಂಡಿದ್ದರು.