ನ್ಯಾಯಕ್ಕಾಗಿ ನಿಂತವರು
ಅನ್ನದಾತರ ಧೀರ ನಡಿಗೆಗೆ
ಹೆದ್ದಾರಿ ಹರ್ಷಗೊಂಡಿದೆ
ಭುಗಿಲೆದ್ದ ಹೋರಾಟದ ಹಾಡಿಗೆ
ಜೋಳದ ತೆನೆ ತಲೆದೂಗಿದೆ
ಘೋಷಣೆಗಳ ಆರ್ಭಟಕ್ಕೆ
ಶೋಷಕರ ಎದೆಗುಂಡಿಗೆ ನಡುಗಿದೆ
ದೆಹಲಿಯ ದರ್ಬಾರಿನ ಸುತ್ತ
ಜನಾಕ್ರೋಶದ ಹುತ್ತ
ಕರಾಳ ಕಾಯ್ದೆ ಬರೆದವರ ವಿರುದ್ಧ
ಕೆಂಡಕಾರಿತು ಕಿಚ್ಚ
ಭೂಮಿ ಕದಿಯಲು ಬಂದವರ ಬಂಧಿಸಲು
ತಲೆ ಎತ್ತಿತು ಬೆವರು ಬಾವುಟಗಳ ಕೋಟೆ
ಕ್ರಾಂತಿಯ ಕೂಗಿಗೆ ದಿಕ್ಕೆಟ್ಟ ಚಳಿ
ಬೆಚ್ಚಿಬಿದ್ದಿತು ನೋಡಾ
ಪೋಲೀಸರ ಕೃತಕ ಮಳಿ
ಎದುರಿಗಿದ್ದ ಯೋಧ ಹೆತ್ತ ಕರುಳಾದರೂ
ಗುಂಡುಗಳಿಗೆ ಎದೆಯೊಡ್ಡಿದ ರೈತರ ರೊಚ್ಚಿಗೆ
ಸರ್ಕಾರವೇ ಥರಗುಟ್ಟಿತು ಕೇಳಾ…
ನ್ಯಾಯಕ್ಕಾಗಿ ನಿಂತ್ತವರ
ನೆತ್ತರು ಕೇಳುವ ನರರಾಕ್ಷಸರೇ
ಇಲ್ಲೊಂದು ನೆನಪಿದೆ ಕೇಳಿ
ನೊಂದವರ ರಕ್ತದಿಂದಲೇ
ಈ ಕೋಟೆ ಕೆಂಪಾಗಿದೆ…
ನಮ್ಮವರ ಬೆವರಿನಿಂದಲೇ
ಆ ಬೆಟ್ಟ ಹಸಿರಾಗಿದೆ…
ಅನ್ನ ಕೊಡುವ ನೆಲ
ಉಸಿರು ಕೊಟ್ಟ ಗಾಳಿ
ವಿಷವಾಗಲು ಬಿಡಲಾರೆವು
ನೇಗಿಲ ಗೆರೆಯೊಳಗೆ
ನಮ್ಮ ಗೋರಿ ಕಟ್ಟಿಕೊಳ್ಳುವ ಮುನ್ನ
ನಿಮ್ಮ ಹೆಣಗಳ ಮೇಲೆ
ಇತಿಹಾಸ ಬರೆಯುತ್ತೇವೆ
ಹೊಲಗಳ ಮೇಲೆ ಹಕ್ಕಿಗಳು ಹಾರಿ
ಹೂಮಳೆ ಸುರಿಸುತ್ತವೆ…
ಹೋರಾಟದ ಕಹಳೆ ಮತ್ತೆ ಮತ್ತೆ ಊದುತ್ತವೆ….