ಯಾದಗಿರಿ: ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ದಲಿತ ಯುವಕನ ಬೆತ್ತಲೆಯಾಗಿ ಮೆರವಣಿಗೆ ಮಾಡಿದವರ ಮೇಲೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಹಾಗೂ ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಕಾರ್ಯಕರ್ತರು, ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗೇಟ್ ಶನಿಮಹಾತ್ಮ ಕಟ್ಟೆ ಬಳಿ ಶಾನಟ್ರಹಳ್ಳಿ ನಿವಾಸಿಯಾದ ಎಸ್. ಪ್ರತಾಪ ಎಂಬ ಪರಿಶಿಷ್ಟ ಜಾತಿಯ ಯುವಕ ದೇವಸ್ಥಾನ ಪ್ರವೇಶ ಮಾಡಿದನೆಂದು ಸವರ್ಣೀಯ ಜಾತಿ ಸೂಚಕ ಮನಸುಳ್ಳವರು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದು ಮಾನವ ಸಮಾಜ ತಲೆ ತಗ್ಗಿಸುವಂತಾಗಿದೆ. ಆದರೆ ಈ ಘಟನೆಯನ್ನು ಕೆಲವು ಮಾಧ್ಯಮಗಳು ತಿರುಚುವ ಪ್ರಯತ್ನ ಮಾಡುತ್ತಿವೆ.
ಆದ್ದರಿಂದ ಈ ನೀಚ ಕೃತ್ಯ ಮಾಡಿದವರ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿ ಕೇಸಿನಲ್ಲಿ ಭಾಗಿಗಳಾಗಿರುವ ಆರೋಪಿಗಳನ್ನು ಬಂಧಿಸಿರುವುದು ಸರಿಯಷ್ಟೇ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಸ್ಲಂ ಜನಾಂದೋಲನ ಜಿಲ್ಲಾದ್ಯಕ್ಷ ಹಣಮಂತ ಶಹಾಪೂರಕರ್ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕಿ ರೇಣುಕಾ ಸರಡಗಿ, ಉಪಾದ್ಯಕ್ಷರಾದ ಯಂಕಮ್ಮ ಮಾಳಿಕೇರಿ, ಈರಮ್ಮ ಕೌಳೂರು, ಖಜಾಂಚಿ ಆನಂದ ಚಟ್ಟೆರಕರ್ ಇನ್ನಿತರರು ಇದ್ದರು.