ಪುಸ್ತಕಗಳ ಲೋಕಾರ್ಪಣೆ 7 ರಂದು

0
182

ಕಲಬುರಗಿ: ಇಲ್ಲಿನ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶ ಹಾಗೂ ಬಸವ ಪ್ರಕಾಶನದ 44ನೇ ವಾರ್ಷಿಕೋತ್ಸವ ಹಾಗೂ 105 ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಫೆ.7 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಸಿದ್ಧಲಿಂಗೇಶ್ವರ ಬುಕ್ ಡಿಪೋದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದ ಪ್ರಕಾಶಕ ಬಸವರಾಜ ಜಿ.ಕೊನೇಕ ಅವರು, ಸಾಹಿತ್ಯದ ವಿವಿಧ ಪ್ರಕಾರಗಳ 44 ಪುಸ್ತಕ ಮತ್ತು 8 ಪಠ್ಯಪುಸ್ತಕ ಸೇರಿ 105 ಪುಸ್ತಕಗಳನ್ನು ಅಂದು ಏಕಕಾಲಕ್ಕೆ ಲೋಕಾರ್ಪಣೆ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಲೇಖಕರು ಸೇರಿದಂತೆ ಕಲ್ಯಾಣ ಕರ್ನಾಟಕದ ಲೇಖಕರ, 10 ಜನ ಮಹಿಳಾ ಲೇಖಕಿಯರ, 10 ಜನ ದಲಿತ ಲೇಖಕರ ಮತ್ತು ಐವರು ಹೊಸ ಲೇಖಕರ ಕೃತಿಗಳು ಇದರಲ್ಲಿವೆ, ಈ ಭಾಗದ 11 ಜನ ಲೇಖಕರ ವಿಮರ್ಶಾ ಕೃತಿಗಳು ಈ ಬಾರಿ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ. ಇಲ್ಲಿಯವರೆಗೆ ಸಂಸ್ಥೆಯ ವತಿಯಿಂದ 2,700 ಕೃತಿಗಳನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಅಫಜಲಪುರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಮಾರಂಭದ ಸಾನಿಧ್ಯವಹಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಹಮತ್ ತರಿಕೆರೆ ಅವರು ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ದಯಾನಂದ ಅಗಸರ ಅವರು ಸಮಾರಂಭ ಉದ್ಘಾಟಿಸುವರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ.ಎಂ.ಎ.ಅಳಗವಾಡಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ತಿಳಿಸಿದರು.

ವಿಶೇಷ ಸನ್ಮಾನ: ಗುವಿವಿ ಕನ್ನಡ ವಿಭಾಗದಿಂದ 11 ಚಿನ್ನದ ಪದಕ ಪಡೆದ ಆಳಂದ ತಾಲ್ಲೂಕಿನ ಮಾಡ್ಯಾಳ್ ಗ್ರಾಮದ ಕು.ಜಯಶ್ರೀ ಶರಣಪ್ಪ ಯಳಸಂಗಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ 7ನೇ ಱ್ಯಾಂಕ್ ಪಡೆದ ಕು.ನಿಖಿತಾ ಬಿ.ಪಾಟೀಲ ಅವರಿಗೆ ಸಮಾರಂಭದಲ್ಲಿ ವಿಶೇಷ ಸನ್ಮಾನ ಮಾಡಲಾಗುವುದು. ಕೊರೊನಾ ವಾರಿಯಱ್ಸ್ ಗಳಾದ ಡಾ.ಮಲ್ಹಾರಾವ ಮಲ್ಲೆ, ಸುರೇಖಾ ಬಿ.ದೇಸಾಯಿ, ಸುನಂದಾ ಮಲ್ಲಿಕಾರ್ಜುನ, ಶಾಂತಾಬಾಯಿ ಮಲ್ಲಿನಾಥ ಬುರ್ಲಿ, ರವಿ ಮಾಲ್ದೆ ಮತ್ತು ಮಾಪಣ್ಣ ಶಿವಶರಣಪ್ಪ ಶ್ರೀಸಂದ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ಲೇಖಕರ ಸಮ್ಮೇಳನ: ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ 8 ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಪ್ರಕಟಿಸುತ್ತಿದೆ. 250 ರಿಂದ 300 ಜನ ಲೇಖಕರ ಕೃತಿಗಳನ್ನು ಪ್ರಕಟಿಸಿದೆ. ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಲೇಖಕರ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ಕೊನೇಕ ತಿಳಿಸಿದರು.

ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಗವಿಸಿದ್ದಪ್ಪ ಪಾಟೀಲ, ಡಾ.ಚಿ.ಸಿ.ನಿಂಗಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here