ಕಲಬುರಗಿ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಫೆ.04 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಜಿಮ್ಸ್ ಆಸ್ಪತ್ರೆಯ ಅವರಣದಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕರ ಡಾ. ಶಿವಾನಂದ ಸುರಗಾಳಿ ಮತ್ತು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಕಲಬುರಗಿ ಹಾಗೂ ಅಲ್-ಬದರ್ ಡೆಂಟಲ್ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಜಾಥಾವು “I Am And I Will” ಎಂಬ ಘೋಷಣೆಯೊಂದಿಗೆ ನಗರದ ಜಿಮ್ಸ್ ಆಸ್ಪತ್ರೆಯಿಂದ ಆರಂಭಗೊಂಡು ಎಸ್.ಟಿ.ಬಿ.ಟಿ ರಸ್ತೆ, ಜಗತ್ ವೃತ್ತ, ಅನ್ನಪೂರ್ಣ ಕ್ರಾಸ್ ನಿಂದ ಮರಳಿ ಜಿಮ್ಸ್ ಆಸ್ಪತ್ರೆಗೆ ಬಂದು ಸಮಾಪ್ತಿಗೊಂದಿತ್ತು.
ಈ ವೇಳೆ ಅಲ್-ಬದರ್ ಡೆಂಟಲ್ ಕಾಲೇಜಿನ ಉಪನ್ಯಾಸಕಿ ಡಾ. ದೀಪಾ ಹೂಗಾರ ಮಾತನಾಡಿ, ದೇಹದ ಯಾವುದೇ ಭಾಗದಲ್ಲಿ ಹುಣ್ಣು ಅಥವಾ ಗಡ್ಡೆಯಂತ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ಗಡ್ಡೆ ದೊಡ್ಡದಾಗಿ ಕ್ಯಾನ್ಸರ್ ಗೆ ತುತ್ತಾಗಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಆದರಿಂದ ಜನರಲ್ಲಿ ಅರಿವು ಮೂಡಿಸಲು ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಜ್ಞ ಹಾಗೂ ಅಧೀಕ್ಷಕ ಡಾ. ಎ.ಎಸ್. ರುದ್ರವಾಡಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರವೀಂದ್ರಕುಮಾರ ನಾಗಲಿಕರ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜಕುಮಾರ ಎ ಕುಲಕರ್ಣಿ, ಜಿಲ್ಲಾ ಕ್ಷೇಯರೋಗ ನಿಯಂತ್ರಣಾಧಿಕಾರಿ ವಿವೇಕಾನಂದ ರೆಡ್ಡಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಶಿವಕುಮಾರ ದೇಶಮುಖ, ಎನ್.ಒ.ಎಚ್.ಪಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಸಂಧ್ಯಾ ಡಾಂಗೆ, ಅಲ್ -ಬದರ್ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಸೈಯದ್ ಝಕಾವುಲ್ಲಾ, ಹಾಗೂ ಎಲ್ಲಾ ಜಿಲ್ಲಾ ಅರೋಗ್ಯ ಕಾರ್ಯಕ್ರಮ ಅಧಿಕಾರಿಗಳು, ತಾಲೂಕ ಆರೋಗ್ಯ ಅಧಿಕಾರಿಗಳು, ದಂತ ಅರೋಗ್ಯ ಅಧಿಕಾರಿಗಳು ಪ್ರಾಧ್ಯಾಪಕರು, ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು. ಅಮರೇಶ ಇಟಗಿ ಕಾರ್ಯಕ್ರಮ ನಿರೂಪಿಸಿದರು.