ಮುದ್ದೇಬಿಹಾಳ: ರಾಜ್ಯದಲ್ಲಿ ಒಂದು ಲಕ್ಷ ಪೊಲೀಸ್ ಸಿಬ್ಬಂದಿಯ ಕೊರತೆಯಿದೆ ಈ ಕೊರತೆ ನೀಗಿಸಲು ಹಂತಹಂತವಾಗಿ ನೇಮಕಾತಿ ನಡೆಯುತ್ತಿದೆ. ಮುಂದಿನ 15 ದಿನಗಳಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ನೀಡಲಿದ್ದೇನೆ ಎಂದು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಪೊಲೀಸರು 12, 14 ಗಂಟೆ, ರಜೆ ಇಲ್ಲದೆ, ವಾರದ ರಜೆ ಇಲ್ಲದೆ ಬಹಳಷ್ಟು ಕಠಿಣ ಪರಿಸ್ಥಿತಿಯಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಬೇರೆ ಇಲಾಖೆಗಳಿಗೆ ಪೊಲೀಸ್ ಇಲಾಖೆಯನ್ನು ಹೋಲಿಸಲು ಸಾಧ್ಯವಿಲ್ಲ. ಉಳಿದ ಇತರ ಸರಕಾರಿ ಇಲಾಖೆಯ ಸಿಬ್ಬಂದಿಗೆ ಹೋಲಿಸಿದರೆ ಪೊಲೀಸ್ ಸಿಬ್ಬಂದಿ ಹುದ್ದೆ ಸಮಾನಾಂತರವಾಗಿಲ್ಲ. ಇದನ್ನು ಸರಿಪಡಿಸಲು ಔರಾದಕರ ವರದಿಯಲ್ಲಿ ಹೇಳಲಾಗಿದೆ ಎಂದು ಮಾಹಿತಿ ನೀಡಿದರು.
ಬೇರೆ ಇಲಾಖೆಯಲ್ಲಿ ಐದು ವರ್ಷಕ್ಕೊಮ್ಮೆ ಸಿಬ್ಬಂದಿಗೆ ಬಡ್ತಿ ಸಿಗ್ಗುತ್ತದೆ. ಆದರೆ, ಪೊಲೀಸ್ ಇಲಾಖೆಯಲ್ಲಿ 15-20 ವರ್ಷಗಳಿಗೊಮ್ಮೆ, ಕೆಲವು ಬಾರಿ ಸಿಬ್ಬಂದಿ ನಿವೃತ್ತಿ ಸಂದರ್ಭದಲ್ಲಿ ಬಡ್ತಿಗೆ ಅವಕಾಶ ಸಿಗುತ್ತದೆ. ಉಳಿದ ಇಲಾಖೆಗಳ ಸಿಬ್ಬಂದಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಮಧ್ಯೆ ಇರುವ ವ್ಯತ್ಯಾಸದ ಅಂತರವನ್ನು ಹೋಗಲಾಡಿಸುವ ಕುರಿತು ಔರಾದಕರ ವರದಿಯಲ್ಲಿ ಪ್ರಸ್ತಾಪವಿದೆ ಈ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಬ್ಯಾಂಡ್, ಅಗ್ನಿಶಾಮಕ ದಳ, ತರಬೇತಿ ಕೇಂದ್ರಗಳು, ಕಾರಾಗೃಹಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಭತ್ಯೆ ನೀಡುವ ಕುರಿತು ಪ್ರಸ್ತಾಪಿಸವಿದೆ. ಇತ್ತೀಚೆಗೆ ಬ್ಯಾಂಡ್ ಸರ್ವಿಸ್ ಗೆ ಸೇರಲು ಜನ ಮುಂದೆ ಬರುತ್ತಿಲ್ಲ. ಹೀಗಾದರೆ ಬ್ಯಾಂಡ್ ಸರ್ವಿಸ್ ಅವನತಿಗೆ ಬರಲಿದೆ. ಇದಕ್ಕೆ ಉತ್ತೇಜನ ಕೊಡಲು ಭತ್ಯೆ ನೀಡಲು ನಿರ್ಧರಿಸಲಾಗಿದೆ ಎಂದರು.