ಸುರಪುರ: ಕೊರೊನಾ ನಿರ್ಮೂಲನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಟಫ್ ರೂಲ್ಸ್ ಜೊತೆಗೆ ವೀಕೆಂಡ್ ಕರ್ಫ್ಯೂ ಅಂಗವಾಗಿ ನಗರದಲ್ಲಿ ಕಠಿಣ ಕ್ರಮಗಳ ಮೂಲಕ ಜನರಲ್ಲಿ ಎಚ್ಚರಿಕೆಯನ್ನು ನೀಡಲಾಗುತ್ತಿದೆ.
ಶುಕ್ರವಾರ ರಾತ್ರಿ ವೀಕೆಂಡ್ ಕರ್ಫ್ಯೂ ಆರಂಭವಾಗುತ್ತಿದ್ದಂತೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಅವರು ರೋಡಿಗಿಳಿಯುವ ಮೂಲಕ ಅನಾವಶ್ಯಕವಾಗಿ ಹೊರಗೆ ಬರುವವರಿಗೆ ಸೋಮವಾರ ಬೆಳಿಗ್ಗೆ ೬ ಗಂಟೆಯ ವರೆಗೆ ಯಾರೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆಯನ್ನು ನೀಡಿದರು ಅಲ್ಲದೆ ಕೆಲವರಿಗೆ ಲಾಠಿ ರುಚಿಯನ್ನು ತೋರಿಸುವ ಮೂಲಕ ಟಫ್ ಕರ್ಫ್ಯೂ ಜಾರಿಯಾಗಿರುವ ಬಗ್ಗೆ ಎಚ್ಚರಿಸಿದರು.
ಅನಾವಶ್ಯಕವಾಗಿ ರಸ್ತೆಗೆ ಬಂದ ಜನರಿಗೆ ತಹಸೀಲ್ದಾರ ನೇತೃತ್ವದಲ್ಲಿ ಲಾಠಿ ಹಿಡಿದು ಎಚ್ಚರಿಕೆ
ಶನಿವಾರ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಜನರು ಹಾಲು ಹಣ್ಣು ತರಕಾರಿ ಖರೀದಿಸಲು ಮನೆಯಿಂದ ಹೊರಗೆ ಬಂದು ಹೋದರು.ನಂತರ ೧೦ ಗಂಟೆಯ ನಂತರ ವೀಕೆಂಡ್ ಕರ್ಫ್ಯೂ ಆರಂಭಗೊಂಡಿದ್ದರಿಂದ ಇಡೀ ನಗರ ಸಂಪೂರ್ಣವಾಗಿ ಬಂದ್ ಆಚರಿಸಿದಂತಿತ್ತು.ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಇನ್ನುಳಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಇಡೀ ನಗರ ಬಿಕೋ ಎನ್ನುತ್ತಿತ್ತು.ಅಲ್ಲದೆ ನಗರದ ಎಲ್ಲೆಡೆ ಪೊಲೀಸರು ಗಸ್ತು ನಡೆಸಿ ಮನೆಯಿಂದ ಯಾರೂ ಹೊರಗೆ ಬರದಂತೆ ಎಚ್ಚರಿಸುತ್ತಿದ್ದರು ಹಾಗು ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ರೋಡಿಗಿಳಿದು ಎಲ್ಲೆಡೆ ಕಲ್ಪಿಸಲಾಗಿರುವ ಬಿಗಿ ಬಂದೋಬಸ್ತ್ ಕುರಿತು ಪರಿಶೀಲನೆಯನ್ನು ನಡೆಸಿದರು.ಅಲ್ಲದೆ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಂದವರಿಗೆ ದಂಡ ವಿಧಿಸುವ ಜೊತೆಗೆ ಅನೇಕ ಬೈಕ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪೊಲೀಸರು ಅನಾವಶ್ಯಕವಾಗಿ ಹೊರಗೆ ಬಂದ ಮೂವತ್ತಕ್ಕೂ ಹೆಚ್ಚು ಜನರ ಬೈಕ್‌ಗಳನ್ನು ವಶಕ್ಕೆ ಪಡೆದು ಪೊಲೀಸ್ ಠಾಣಾ ಆವರಣದಲ್ಲಿ ನಿಲ್ಲಿಸುವ ಜೊತೆಗೆ ವೀಕೆಂಡ್ ಕರ್ಫ್ಯೂ ಮುಗಿಯುವ ವರೆಗೂ ಬೈಕ್‌ಗಳನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸುವುದಾಗಿ ಎಚ್ಚರಿಸಿ ಕಳುಹಿಸಿದರು.