ಬಸವಣ್ಣ ಕಂಡ ಶರಣರು

0
399

ನನಗಿನ್ನೂ ಚೆನ್ನಾಗಿ ನೆನಪಿದೆ. ಲಿಂ. ಎಚ್.ಡಿ. ಚಂದನಗೌಡರು (೧೯೭೪-೭೫)ರಲ್ಲಿ ಸಂಪಾದಿಸಿದ ಶರಣರು ಕಂಡ ಬಸವಣ್ಣ ಎಂಬ ಕೃತಿಯನ್ನು ನಮ್ಮ ಬಸವ ಮಾರ್ಗ ಪ್ರತಿಷ್ಠಾನದ ವತಿಯಿಂದ ೨೦೦೮ರಲ್ಲಿ ಅಪ್ಪ ಲಿಂಗಣ್ಣ ಸತ್ಯಂಪೇಟೆಯವರು ಮತ್ತೆ ಪರಿಷ್ಕರಿಸಿ ಪ್ರಕಟಣೆ ಮಾಡಿದ್ದು. ಆ ಕೃತಿಯನ್ನು ಓದುತ್ತ ಹೋದಂತೆ ಬಸವಣ್ಣನವರು ಸಾಮಾನ್ಯರಲ್ಲ. ಅವರೊಬ್ಬ ವಿನೂತನ ವಿಚಾರವಾದಿ ಎಂಬುದು ಮನದಟ್ಟಾಯಿತು.

ಆ ಕೃತಿಯಲ್ಲಿ ಬಸವಣ್ಣನವರನ್ನು ಅವರ ಸಮಕಾಲೀನ ವಚನಕಾರರು, ಬಸವಣ್ಣನವರ ಇಡೀ ವ್ಯಕ್ತಿತ್ವವನ್ನು ತಮಗೆ ಕಂಡಂತೆ ಚಿತ್ರಿಸಿದ್ದನ್ನು ನೋಡಿದರೆ ನಿಜಕ್ಕೂ ಬೆರಗಾಯಿತು. ವಚನಕಾರರು ಬಸವಣ್ಣನೆ ಗುರು, ಬಸವಣ್ಣನೆ ಲಿಂಗ, ಬಸವಣ್ಣನೆ ಜಂಗಮ, ಬಸವಣ್ಣನೆ ಆಚಾರ ಪುರುಷ, ಬಸವಣ್ಣನೆ ಮೇರು ವ್ಯಕ್ತಿ ಎಂದೆಲ್ಲ ಬಣ್ಣಿಸಿರುವುದನ್ನು ಕಂಡು ಅಬ್ಬಾ! ಬಸವಣ್ಣ ಅದೆಂಥ ರತ್ನಮೌಲಿಕದಚ್ಚು ಎಂದು ಹೆಮ್ಮೆ ಎನಿಸಿತು.

Contact Your\'s Advertisement; 9902492681

ಇಂತಹ ತಾಯ್ತನದ ವ್ಯಕ್ತಿ ಬಸವಣ್ಣನವರು ತಮ್ಮ ಸಮಕಾಲೀನ ಶರಣರನ್ನು ಕಂಡ ಬಗೆ ಯಾವುದು? ಅವರು ಆ ಶರಣರನ್ನು ಅದ್ಹೇಗೆ ಚಿತ್ರಿಸಿದ್ದಾರೆ ಎಂಬ ಕುತೂಹಲ ಉಂಟಾಯಿತು. ಅವರ ವಚನಗಳನ್ನು ತುಂಬಾ ಅಸ್ತೆಯಿಂದ ಓದುತ್ತ ಹೋದೆ. ಆಗ ಬಸವಣ್ಣ ನನಗೆ ಮತ್ತುಷ್ಟು ಸ್ಪಷ್ಟವಾಗುತ್ತ ಹೋದರು. ಶರಣರು ಬಸವಣ್ಣನವರನ್ನು ಕೇವಲ ಗುರು, ಲಿಂಗ, ಜಂಗಮ ಎಂದು ಕರೆದರೆ, ಬಸವಣ್ಣನವರು ತಮ್ಮ ಸಮಕಾಲೀನ ಶರಣರನ್ನು ತಮ್ಮ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿ, ಪ್ರಮಾಣವಾಗಿ ಬಳಸಿರುವುದು ಕಂಡು ಬಂದಿತು. ಮಡಿವಾಳ ಮಾಚಿದೇವನಿಂದಿಡಿದು ಡೋಹರ ಕಕ್ಕಯ್ಯ, ಕಿನ್ನರಿ ಬೊಮ್ಮಯ್ಯ, ಚನ್ನಬಸವಣ್ಣ, ಅಲ್ಲಮರಾದಿಯಾಗಿ ಎಲ್ಲರನ್ನೂ ಅವರು ಪ್ರಾತಃಸ್ಮರಣೀಯರು ಎಂದು ಕರೆದಿದ್ದಾರೆ.

ಅತ್ಯಂತ ಕಟ್ಟ ಕಡೆಯ ಸಮುದಾಯವರೆಂದು ಕರೆಯಲ್ಪಡುವ ಮಾದಾರ ಚೆನ್ನಯ್ಯನವರ ಹೆಸರನ್ನಂತೂ ಅವರು ತಮ್ಮ ಅನೇಕ ವಚನಗಳಲ್ಲಿ ಬಳಸುವ ಮೂಲಕ ಅವರನ್ನು ಕುಲತಿಲಕ, ಕುಲಶ್ರೇಷ್ಠ ಎಂದು ಕೊಂಡಾಡಿದ್ದಾರೆ. ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ ಎಂದು ಹೇಳುವುದರ ಜತೆಗೆ ನಿಮ್ಮ ಪಾದವೇ ಎನಗೆ ದಿಬ್ಯ ಎಂದು ಮುಕ್ತ ಮನಸ್ಸಿನಿಂದ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ನಿಜವಾದ ಶಿವಪಥ, ಶಿವಜ್ಞಾನ ಮಾದಾರ ಚನ್ನಯ್ಯನಿಗಿತ್ತು ವಿನಃ ಮತ್ತಾರಿಗೂ ಇಲ್ಲ. ಹುಟ್ಟಿನಿಂದ ಯಾರೂ ಮೇಲಲ್ಲ. ಕೀಳಲ್ಲ. ಆನು ಹಾರುವನೆಂದಡೆ ಕೂಡಲ ಸಂಗಮದೇವ ನಗುವನಯ್ಯ ಎಂದು ಹೇಳಿ ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ ಮುಂತಾದ ಶರಣರೆ ನಿಜವಾದ ಕುಲಜರು ಎಂಬ ಸಮತಾವಾದವನ್ನು ಸಾರಿದ್ದಾರೆ. ಮಾದಾರ ಚನ್ನಯ್ಯನ ಅಂಬಲಿ ರುಚಿಯ ಮುಂದೆ ಮತ್ತಾವ ಮೃಷ್ಟಾನ್ನ ಬೋಜನ ರುಚಿಸದು ಎಂದು ಹೇಳುವ ಮೂಲಕ ದುಡಿದುಣ್ಣುವ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ.

ಭಕ್ತಿ ಭಂಡಾರಿ ಬಸವಣ್ಣ ಎಂದು ಶರಣರು ಕರೆದರೆ, ಇವರು ಕಕ್ಕಯ್ಯ, ಚನ್ನಯ್ಯ, ದಾಸಯ್ಯರು ತಮ್ಮ ಭಕ್ತಿಯ ಬಿಕ್ಷೆ ನೀಡಿ ಎನ್ನ ಪಾತ್ರೆ ತುಂಬಿಸಿದರು. ಭಕ್ತಿ ಇಲ್ಲದ ಬಡವ ನಾನಯ್ಯ ಎಂದು ತಮ್ಮ ವಿನಮ್ರತೆಯನ್ನು ಮೆರೆದಿದ್ದಾರೆ. ನಿಜವಾದ ಭಕ್ತ ಯಾರು? ಭಕ್ತಿ ಎಂಬುದು ಹೇಗಿರಬೇಕು ಎಂಬುದಕ್ಕೆ ಇವರನ್ನೇ ಜೀವಂತ ಉದಾಹರಣೆ ನೀಡುವ ಮೂಲಕ ಭಕ್ತಿಗೆ ಹೊಸ ಡೆಫನೇಷನ್ ಬರೆದಿದ್ದಾರೆ. “ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ” ಎಂದು ತಮ್ಮನ್ನು ಜಾತಿ ಸಂಕರಗೊಳಿಸಿಕೊಳ್ಳುವ ಬಸವಣ್ಣನವರು ಜಾತಿವಿನಾಶದ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ.

ಗೋತ್ರ ನಾಮ ಮಾದಾರ ಚನ್ನಯ್ಯ, ಡೋಹಾರ ಕಕ್ಕಯ್ಯ ಎಂದು ಹೆಮ್ಮೆಯಿಂಂದ ಹೇಳಿ ವಿನಃ ಹಿಂಜರಿಯದೆ, ಸುಮ್ಮನಿರದೆ, ತಲೆಯ ಕೆಳಗೆ ಮಾಡಿ ನೆಲವ ಬೆರೆಯಬೇಡಿ ಎಂದು ಅಂತ್ಯಜರಲ್ಲಿ ಆತ್ಮಸ್ಥೈರ್ಯ ತುಂಬಿದ ಬಸವಣ್ಣನವರು ತಮಗಿಂತ ವಯಸ್ಸಿನಲ್ಲಿ ಚಿಕ್ಕವರಾಗಿದ್ದ ತಮ್ಮ ಅಳಿಯ ಚನ್ನಬಸವಣ್ಣನವರನ್ನು “ಎನ್ನಂತರಂಗವ ಶುದ್ಧ ಮಾಡಿದಾತ” ಎಂದು ಕರೆಯುವ ಮೂಲಕ ಅರಿವಿಂಗೆ ಹಿರಿದು ಕಿರಿದಿಲ್ಲ. ಪ್ರಭುದೇವರ, ಚನ್ನಬಸವಣ್ಣನವರ ಕರುಣೆಯಿಂದ ನಾನು ಬದುಕಿದ್ದೇನೆ ಎಂದು ಹೇಳಿದ್ದಾರೆ.

ನ್ಯಾಯ ನಿಷ್ಠರಿ, ದಾಕ್ಷಿಣ್ಯಪರನಲ್ಲದ ಬಸವಣ್ಣನವರ ಬಾಯಿಯಿಂದ ಇಂತಹ ಮಾತುಗಳು ಬಂದಿರಬೇಕಾದರೆ ಶರಣರು ಅದೆಂತ ಶ್ರೇಷ್ಠ ವ್ಯಕ್ತಿಗಳಾಗಿದ್ದರು ಎಂಬುದನ್ನು ನಾವು ಯೋಚಿಸಲೇಬೇಕಾದ ಸಂಗತಿ! ಮುಗಿದ ಕೈ, ಬಾಗಿದ ತಲೆಯಾಗಿದ್ದ ಬಸವಣ್ಣನವರು ತಮ್ಮ ಸಮಕಾಲೀನ ಶರಣರನ್ನು ಹೃದಯಪೂರ್ವಕವಾಗಿ ಹಾಡಿ ಹೊಗಳಿರುವುದನ್ನು ಈ ಕೆಲವು ವಚನಗಳಲ್ಲಿ ಗುರುತಿಸಬಹುದಾಗಿದೆ. ಇನ್ನೂ ಹಲವು ವಚನಗಳನ್ನು ಉದಾಹರಿಸಬಹುದಾಗಿದೆ.

೧. ಎನ್ನ ತಪ್ಪು ಅನಂತ ಕೋಟಿ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ
ಇನ್ನು ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ,
ಕೂಡಲಸಂಗಮ ದೇವಯ್ಯಾ
ನಿಮ್ಮ ಪ್ರಮಥರ ಮುಂದೆ ಕಿನ್ನರಿ ಬೊಮ್ಮಣ್ಣ ಸಾಕ್ಷಿ

೨. ಓದಿದಡೇನು, ಕೇಳಿದಡೇನು, ಶಿವಪಥವರಿಯದನ್ನಕ್ಕ
ಓದಿತ್ತು ಕಾಣಿರೋ ಶುಕನು, ಶಿವಜ್ಞಾನವರಿಯದನ್ನಕ್ಕ
ಓದಿದ ಫಲವು ಮಾದಾರ ಚನ್ನಯ್ಯಂಗಾಯಿತ್ತು
ಕೂಡಲ ಸಂಗಮದೇವಾ

೩. ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬನೆ ಚನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ

೪. ಭಕ್ತಿಯಿಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲಲ್ಲೂ ಬೇಡಿದೆ
ಚನ್ನಯ್ಯನ ಮನೆಯಲ್ಲೂ ಬೇಡಿದೆ
ದಾಸಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿ ಬಿಕ್ಷೆಯನ್ನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ

೫. ಅಪ್ಪನು ನಮ್ಮ ಮಾದಾರ ಚನ್ನಯ್ಯ
ಬೊಪ್ಪನು ನಮ್ಮ ಡೋಹಾರ ಕಕ್ಕಯ್ಯ
ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ
ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ
ಎನ್ನನೇತಕ್ಕರಿಯಿರಿ ಕೂಡಲ ಸಂಗಮದೇವಾ

೬. ಅಂಗದ ಮೇಲೆ ಲಿಂಗ ಆಯತವಾಗಿ
ಲಿಂಗಾರ್ಚನೆಯ ಮಾಡಿದಡೆ ಭವ ಹಿಂಗದೆಂದು
ಪ್ರಾಣದ ಮೇಲೆ ಲಿಂಗ ಸ್ವಾಯತವ ಮಾಡಿ
ಎನ್ನಂತರಂಗ ಶುದ್ಧವ ಮಾಡಿ
ಲಿಂಗೈಕ್ಯದ ಹೊಲಬ ತೋರಿದನಯ್ಯ ಚನ್ನಬಸವಣ್ಣನು
ಕಾಯದ ಕಳವಳವು ದಾಸೋಹದ ಮುಖದಲ್ಲಿ
ಅಲ್ಲದೆ ಹರಿಯದೆಂದು ಜಂಗಮಮುಖಲಿಂಗವಾಗಿ
ಬಂದು ಎನ್ನ ಶಿಕ್ಷಿಸಿ ರಕ್ಷಿಸಿ ಎನ್ನ ಸಂಸಾರದ ಪ್ರಕೃತಿಯ
ಹರಿದನಯ್ಯ, ಪ್ರಭುದೇವರು. ಕೂಡಲಸಂಗಮದೇವರಲ್ಲಿ
ಪ್ರಭುದೇವರ ಚೆನ್ನಬಸವಣ್ಣನ ಕರುಣದಿಂದಲಾನು ಬದುಕಿದೆನು.

(ಕೃಪೆ: ಶರಣ ಮಾರ್ಗ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here