ಕಲಬುರಗಿ: ಕೋಟ್ಪಾ ಕಾಯ್ದೆ-2003ನ್ನು ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಷೇಧ ಕೋಶದಡಿ ಜಿಲ್ಲಾ ತನಿಖಾ ತಂಡವು ಸೋಮವಾರ ಕಲಬುರಗಿ ನಗರದ ಪ್ರಮುಖ ಪಾನ್ ಶಾಪ್, ಹೋಟೆಲ್ ಹಾಗೂ ಸಾರ್ವಜನಿಕ ಪ್ರದೇಶಗಳಗೆ ಭೇಟಿ ನೀಡಿ ಧೂಮಪಾನ ಮಾಡುತ್ತಿರುವ ಹಾಗೂ ಕೋಟ್ಪಾ ಕಾಯ್ದೆ-2003ರ ಅಡಿಯಲ್ಲಿ ನಿಯಮ ಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಹ ಅಂಗಡಿಗಳಿಗೆ ದಂಡ ವಿಧಿಸಿ, ಕೋಟ್ಪಾ ಕಾಯ್ದೆ-2003 ರ ಸೆಕ್ಷನ್-೦4 ಮತ್ತು 05 ಕ್ಕೆ ಸಂಬಂಧಿಸಿದಂತೆ ಒಟ್ಟು 18 ಪ್ರಕರಣಗಳು ದಾಖಲಿಸಿ, 3000 ರೂ.ಗಳ ದಂಡ ವಿಧಿಸಲಾಯಿತು.
ಸದರಿ ತಂಡವು ಸಾರ್ವಜನಿಕರಲ್ಲಿ ತಿಳುವಳಿಕೆ ಮತ್ತು ಜನಸಾಮಾನ್ಯರ ಆರೋಗ್ಯ ಕಾಪಾಡುವ ಹಿತ ದೃಷ್ಟಿಯಿಂದ ಕಾಯ್ದೆಯ ನಿಯಮ ಪಾಲನೆ ಮಾಡುವಂತೆ ಮತ್ತು ಕೋಟ್ಪಾ ಕಾಯ್ದೆ-೨೦೦೩ರ ಸೆಕ್ಷನ್-೦೪ರ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಇದಲ್ಲದೆ 18 ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಿದರು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯ ನಾಮಫಲಕಗಳನ್ನು ಎಲ್ಲ ಪಾನ್‌ಶಾಪ್, ಹೋಟೇಲ್, ಬಾರ್ ಮತ್ತು ರೇಸ್ಟೋರೆಂಟ್‌ಗಳ ಮಾಲೀಕರು/ ಮಾರಾಟಗಾರರು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸೂಚಿಸಲಾಯಿತು.
ಈ ತಂಡದಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶದ ಎಸ್.ಜೆ ಪಾಟೀಲ್, ಮಲ್ಲಿಕಾರ್ಜುನ, ಎಸ್.ಐ. ಫೈಲೇರಿಯಾ, ರವಿ ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.