ಆಶಾ ಕಾರ್ಯಕರ್ತೆಯರಿಗೆ ವೇತನ-ಪರಿಹಾರ ಮರೀಚಿಕೆ: ಆನ್‍ಲೈನ್ ಪ್ರತಿಭಟನೆ

0
71

ವಾಡಿ: ಮರಣ ಮೃದಂಗ ಭಾರಿಸುತ್ತಿರುವ ಮಹಾಮಾರಿ ಕೊರೊನಾ ಸೊಂಕಿನ ವಿರುದ್ಧ ಹೋರಾಡುತ್ತಲೇ ಸೊಂಕಿತರ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ವೇತನ ಮತ್ತು ಕೋವಿಡ್ ಪರಿಹಾರದಿಂದ ವಂಚಿತರಾಗಿದ್ದಾರೆ. ಸರಕಾರ ಆಶಾಗಳ ಸೇವೆಯನ್ನು ಕಾಲುಕಸದಂತೆ ಕಾಣುತ್ತಿದೆ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ ಆರೋಪಿಸಿದರು.

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಎಐಯುಟಿಯುಸಿ ಹಾಗೂ ರಾಜ್ಯ ಸಂಯುಕ್ತ ಅಶಾ ಕಾರ್ಯಕರ್ತೆಯರ ಸಂಘ ಕರೆ ನೀಡಲಾದ ರಾಜ್ಯಮಟ್ಟದ ಆನ್‍ಲೈನ್ ಚಳುವಳಿಯನ್ನು ಬೆಂಬಲಿಸಿ, ಮಂಗಳವಾರ ವಾಡಿ, ನಾಲವಾರ, ಕೊಲ್ಲೂರ, ಚಿತ್ತಾಪುರ, ರಾವೂರ, ಇಂಗಳಗಿ, ಲಾಡ್ಲಾಪುರ, ಹಳಕರ್ಟಿ ಸೇರಿದಂತೆ ವಿವಿಧೆಡೆ ನಡೆದ ಆನ್‍ಲೈನ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಾಂಕ್ರಾಮಿಕ ರೋಗದಿಂದ ನಗರ ಮತ್ತು ಹಳ್ಳಿಗಳು ನಲುಗುತ್ತಿವೆ. ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತ ಕೊರೊನಾ ಆತಂಕದಲ್ಲಿರುವ ಜನರಿಗೆ ಆತ್ಮವಿಶ್ವಾಸ ತುಂಬುವ ಜತೆಗೆ ವೈದ್ಯಕೀಯ ಸೌಲಭ್ಯಕ್ಕಾಗಿ ಆಶಾಗಳು ಶ್ರಮಿಸುತ್ತಿದ್ದಾರೆ. ಸೊಂಕಿತರ ಸರ್ವೆ, ಮಾತ್ರೆ ವಿತರಣೆ, ಸೊಂಕು ಪರೀಕ್ಷೆಗೆ ಸಲಹೆ ಸೇರಿದಂತೆ ಇತರ ಕಾರ್ಯಗಳಲ್ಲಿ ತೊಡಗಿರುವ ಈ ಕೊರೊನಾ ವಾರಿಯರ್ಸ್‍ಗಳಿಗೆ ಸರಕಾರ ಮೂರು ತಿಂಗಳ ವೇತನ ನೀಡಿಲ್ಲ. ಸೊಂಕಿನ ಸುರಕ್ಷತೆ ಹಾಗೂ ವೈಯಕ್ತಿಕ ಭದ್ರತೆಯೂ ಒದಗಿಸಿಲ್ಲ. ಇದರ ನಡುವೆ ಆರೋಗ್ಯ ಇಲಾಖೆ ಮಾನಸಿಕ ಕಿರುಕುಳ ನೀಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶರಣು ಹೇರೂರ, ವೇತನ ಮಂಜೂರು ಮಾಡುವ ಜತೆಗೆ ಸೊಂಕಿಗೊಳಗಾದ ಆಶಾಗಳ ಕುಟುಂಬಗಳನ್ನು ಸಶಕ್ತಗೊಳಿಸಲು ರೂ.25000 ಕೋವಿಡ್ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ನಾಗಮ್ಮ ಕೊಲ್ಲೂರ ಮಾತನಾಡಿ, ಇತರ ಕೊರೊನಾ ವಾರಿಯರ್ಸ್‍ಗಳಿಗೆ ನೀಡಿದಂತೆ ನಮಗೂ ರೂ.5000 ಪರಿಹಾರ ನೀಡಬೇಕು. ಕೋವಿಡ್ ಸೊಂಕಿನಿಂದ ಮೃತಪಟ್ಟ ಆಶಾಗಳ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಆಶಾಗಳಾದ ವಿಜುಬಾಯಿ ರಾಠೋಡ, ದೇವಮ್ಮ ವಡ್ನಳ್ಳಿ, ಸಾವಿತ್ರಿ ಬಟಗೇರಾ, ಮಲ್ಲಮ್ಮ ಪಾಟೀಲ, ಜ್ಯೋತಿ ಶಾಂಪೂರಹಳ್ಳಿ, ಶಿವಲೀಲಾ ಹಡಪದ, ಸಂತೋಷಿ ರಾವೂರ, ಜಯಶ್ರೀ ಸಿಂಧೆ, ಮಾಣಿಕೆಮ್ಮ, ರತ್ನಮ್ಮ ಕಟ್ಟಿಮನಿ, ಅನಿತಾ ವಾಡೇಕರ, ತಿಪ್ಪಮ್ಮ, ಅರುಣಾ, ಮಲ್ಲಮ್ಮ, ಕವಿತಾ ಕೋರವಾರ, ರೇಣುಕಾ ದಂಡೋತಿ, ಆಶಾ ರಾಠೋಡ ಹಾಗೂ ಎಐಯುಟಿಯುಸಿ ಕಾರ್ಯಕರ್ತರು, ಬೇಡಿಕೆಗಳ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here