ಕಲಬುರಗಿ: ಶಿಕ್ಷಕ ವೃತ್ತಿ ಪವಿತ್ರವಾಗಿದೆ. ಅಂಥ ವೃತ್ತಿಗೆ ಸಾರ್ಥಕ ಬದುಕಿಗೆ ಅನುಭಾವದ ಕ್ಷಣಗಳೆ ಕಾರಣ ಎಂದು ಪೂಜ್ಯ ವರಜ್ಯೋತಿ ಭಂತೇಜಿ ಅವರು ಹೇಳಿದರು.
ಇಂದಿಲ್ಲಿ ನಗರದ ಡಾ ಅಂಬೇಡ್ಕರ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ, ಐ ಎಸ್ ವಿದ್ಯಾಸಾಗರ ದಂಪತಿಗಳಿಗೆ ಸತ್ಕರಿಸಿ ಮಾತನಾಡಿದರು. ವ್ಯಕ್ತಿಯ ಸಾಧನೆಯ ಬದುಕಿನ ಪ್ರವೃತ್ತಿಗಳು ಆಧಾರವಾಗುತ್ತವೆ. ಈ ಸಾಧನೆಯ ಹಿಂದೆ ಮಹಿಳೆಯರ ಸಹಕಾರ ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾಸಾಗರ ದಂಪತಿಗಳ ಆದರ್ಶಕ್ಕೆ ಅವರ ಸಮಾಜಮುಖಿ ಕಾರ್ಯಗಳೇ ಸಾಕ್ಷಿಯಾಗಿವೆ ಎಂದು ನುಡಿದರು.
ಸಾಹಿತಿಗಳಾದ ಡಾ ಕೆ ಎಸ್ ಬಂಧು ಸಿದ್ದೇಶ್ವರಕರ ಮತ್ತು ಧರ್ಮಣ್ಣ ಧನ್ನಿ ಅವರು ಮಾತನಾಡಿ, ಪ್ರತಿ ಹಳ್ಳಿಯಲ್ಲಿ ಸಂಚರಿಸಿ ಡಾ ಅಂಬೇಡ್ಕರರ ಜೀವನ ಮತ್ತು ಸಂದೇಶಗಳನ್ನು ತಲುಪಿಸಿದ ವಿದ್ಯಾಸಾಗರ ಸೇವಾ ಕಾರ್ಯ ಸದಾ ಸ್ಮರಿಸುವಂಥದು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಭವಿಷ್ಯವನ್ನು ಕಟ್ಟಿ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ ಐ ಎಸ್ ವಿದ್ಯಾಸಾಗರ ಅವರು, ಶಿಕ್ಷಕ ವೃತ್ತಿ ಜೀವನದಲ್ಲಿ ತೃಪ್ತಿ ತಂದಿದೆ. ನನ್ನ ಬೋಧನೆಯಿಂದ ಅನೇಕ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿಮಾನ ಪಡುವಂತ್ತಾಗಿದೆ ಎಂದರು.
ಡಾ, ದಿಲೀಪ ನವಲೆ, ಡಾ ಹರ್ಷವರ್ಧನ ಮಾತನಾಡಿದರು. ಉಪನ್ಯಾಸ ಡಾ ಗಾಂಧೀಜಿ ಮೊಳಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಶ್ರೀ ಐ ವಿದ್ಯಾಸಾಗರ, ಮಹಾದೇವಿ ಬಂಧು, ಚಂದ್ರಕಾಂತ ಹಾಗರಗಿ, ರಾಹುಲ ಶರ್ಮಾ ಸೇರಿದಂತೆ ಅವರ ಅಭಿಮಾನಿಗಳು, ಗಣ್ಯರು ಭಾಗವಹಿಸಿದರು.
ನಂತರ ವಿದ್ಯಾಸಾಗರ ದಂಪತಿಗಳಿಗೆ ಅಭಿಮಾನಿಗಳು ಸತ್ಕರಿಸಿ ಗೌರವಿಸಿದರು. ಶಿವಶಂಕರ ಹಡಗಿಲ್ ವಂದಿಸಿದರು.