ತುಂಗ ಭದ್ರಾ
ನಾಡ ನೆಲವನು ಪಾವನಗೊಳಿಸಲು
ನಡೆದಳು ತಾಯಿ ತುಂಗಭದ್ರೆ
ಅಡಿಯನಿಟ್ಟಿಹಳು ಹಸಿವ ನೀಗಲು
ರೈತಾಪಿ ಬದುಕಿಗೆ ತುಸು ಭದ್ರ…
ಪಾದ ಹೊರಳಿಸಿ ಅನ್ನ ಬೆಳೆಯಿಸಿ
ನಾಡಿನ ಹಸಿವನು ನೀಗಿಹಳು….
ದಾಹದಿ ಬಳಲುವ ಜೀವವನುಳಿಸಿ
ದಾಹ ನೀಗುತ ಹರಿದಿಹಳು…
ಭತ್ತದ ಗದ್ದೆಗೆ ಚಿತ್ತವ ಹರಿಸುತ
ನಲಿವಳು ಬೇಳಕ್ಕಿ ಸಾಲಿನೊಳು
ತೆಂಗು ಕಂಗು ಬಾಳೆಯ ನೀಡುತ
ನಿಂತಳು ಕಬ್ಬಿನ ಹಾಲಿನೊಳು….
ಕಟ್ಟಿದ ಕಟ್ಟೆಯು ತುಂಬುತ ಬರಲು
ತೋಷದಿ ಹರಿವಳು ನದಿಯಾಗಿ….
ತೇಲುತ ಸಾಗೊ ರಭಸದ ಅಲೆಯಲು
ಇರುವಳು ಜೀವದ ಸೆಲೆಯಾಗಿ…..
ಮಡಿಲ ಸೇರುವ ಮಾಲಿನ್ಯ ನೆನೆದು
ಕೊರಗಿ ಕುಂತರೂ ವಿರಸದಲಿ….
ಒಡಲು ತುಂಬಲು ವೇಗದಿ ಹರಿದು
ದುಮ್ಮಿಕ್ಕುವಳು ರಭಸದಲಿ…
ಬಸವರಾಜ್ ಸಿ